Political News: ಅಸಲು-ಬಡ್ಡಿ ಸಮೇತ ಸಾಲ ತೀರಿಸುವುದು ನಮಗೂ ಗೊತ್ತು: ಕಾಂಗ್ರೆಸ್ ವಿರುದ್ಧ ಸುನೀಲ್ ಗುಡುಗು

Political News: ನೀಟ್ ಪರೀಕ್ಷೆ ಪ್ರತಿಭಟನೆ ವೇಳೆ ಉಮರ್ ಖಾಲೀದ್ ಪರ ಘೋಷಣೆ ಕೂಗಿದ್ದನ್ನು ವಿರೋಧಿಸಿ ಮಾತನಾಡಿದ್ದ ಮಾಜಿ ಸಚಿವ ಸಿ.ಟಿ.ರವಿ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದೆ.

ಈ ವಿರುದ್ಧ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಸಚಿವ ಸಿ.ಟಿ.ರವಿಯವರಿಗೆ ನೋಟಿಸ್ ನೀಡಲು ಹೋದ ರಾಜ್ಯ ಪೊಲೀಸ್ ಇಲಾಖೆಯ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇನೆ. ಪೊಲೀಸರ ಕಾರ್ಯ ವೈಖರಿ ಬಗ್ಗೆ ಖುದ್ದು ರಾಜ್ಯ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ನಂತರವೂ ಖಾಕಿಧಾರಿಗಳು ಆಳುವ ಸರ್ಕಾರದ ಆಳುಗಳಾಗಿ ವಿರೋಧಿ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.‌ ಸಿ.ಟಿ.ರವಿ ಅವರ ವಿರುದ್ಧ ನಡೆಸುವ ಯಾವುದೇ ದುರುದ್ದೇಶಪೂರಿತ ಕ್ರಮವನ್ನು ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ಪ್ರಿಯಾಂಕ್ ಖರ್ಗೆಯವರೇ ನಿಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ರವಿಯವರಿಗೂ ಇದೆ. ದೇಶ ವಿರೋಧಿ ಉಮರ್ ಖಾಲಿದ್ ಪರ ಘೋಷಣೆ ಹಾಕಿದ್ದರಲ್ಲಿ ತಪ್ಪೇನಿದೆ ? ಎಂಬರ್ಥದಲ್ಲಿ ಮಾತನಾಡುವ ಪ್ರಿಯಾಂಕ ಖರ್ಗೆಯವರಿಗೆ ದೇಶ, ಚುನಾಯಿತ ಸರ್ಕಾರ, ಹಿಂದು ವಿಚಾರಧಾರೆಗಳ ವಿರುದ್ಧ ಮನಬಂದಂತೆ ಮಾತನಾಡುವ ನಗರ ನಕ್ಸಲರು ಕಾಣುವುದಿಲ್ಲ, ಅವರ ದ್ವೇಷಪೂರಿತ ಹೇಳಿಕೆಗಳೂ ಕೇಳಿಸುವುದಿಲ್ಲ ಎಂದು ರಾಜ್ಯ ಕಾಾಂಗ್ರೆಸ್ ನಾಯಕರ ವಿರುದ್ಧ ಸುನೀಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಲ್ ಗಳನ್ನು ಬಂಧಿಸಿ ಎಂದರೆ ಫೇಸ್ ಬುಕ್ ಪೋಸ್ಟ್, ಭಾಷಣದ ವಾಕ್ಯಗಳನ್ನು ಹುಡುಕುವುದಕ್ಕೆ ನಿಮ್ಮ ಐಪಿಎಸ್ ಪಡೆಯನ್ನು ವಿನಿಯೋಗಿಸುತ್ತಿದ್ದೀರಿ. ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ನೀವು ಕಣ್ಣಿದ್ದು‌ ಕುರುಡರಾಗಿದ್ದೀರಿ, ಕಿವಿಯಿದ್ದು ಕಿವುಡರಾಗಿದ್ದೀರಿ. ಆದರೆ ನಾಲಿಗೆ ಮಾತ್ರ ಎಲ್ಲದರತ್ತ ತುಡಿಯುತ್ತಿದೆ.
ಕಾನೂನು- ಸುವ್ಯವಸ್ಥೆಯ ನೈಜ ಪ್ರಶ್ನೆ ಎದುರಾದಾಗ ತೆಪ್ಪಗೆ ಮರೆಯಾಗುವ ಪ್ರಿಯಾಂಕ ಖರ್ಗೆಯವರೇ ಅಧಿಕಾರ ಯಾರಿಗೂ ಶಾಶ್ವತವಲ್ಲ. ನಿಮ್ಮ ಸರ್ಕಾರದ ಪತನದ ದಿನಗಣನೆ ಈಗಾಗಲೇ ಪ್ರಾರಂಭವಾಗಿದೆ. ಅಸಲು- ಬಡ್ಡಿ ಸಮೇತ ಸಾಲ ತೀರಿಸುವುದು ನಮಗೂ ಗೊತ್ತು ಎಂದು ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

About The Author