Political News: ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್ ನಿರ್ಲಕ್ಷಿಸುತ್ತಿದೆ. ಅಲ್ಲಿನ ರೈತರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದರೂ, ಕಾಂಗ್ರೆಸ್ ಪಕ್ಷ ಈ ಬದಿ ಗಮನ ಹರಿಸುತ್ತಿಲ್ಲವೆಂದು ಬಿಜೆಪಿ ನಾಯಕ ಡಾ.ಸುಧಾಕರ್ ಆರೋಪಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡಾ.ಸುಧಾಕರ್, ರಾಜ್ಯದ ಸರಾಸರಿ ಶೇ.13.49ರಷ್ಟಿರುವ ಕೊಳವೆಬಾವಿ ವೈಫಲ್ಯದ ಪ್ರಮಾಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರೋಬ್ಬರಿ ಶೇ.32.28ಕ್ಕೆ ತಲುಪಿದೆ. ಅಂದರೆ ಜಿಲ್ಲೆಯ ಪ್ರತಿ ಮೂರು ಕೊಳವೆಬಾವಿಗಳಲ್ಲಿ ಒಂದು ವಿಫಲವಾಗುತ್ತಿದೆ. ಇದು ಜಿಲ್ಲೆಯ ಜಲಸಂಕಷ್ಟದ ಗಂಭೀರತೆಗೆ ಸಾಕ್ಷಿ. ಕೃಷಿಗೆ ನೀರಿಲ್ಲ, ಕುಡಿಯಲು ನೀರಿಲ್ಲ, ಅಂತರ್ಜಲದ ಮಟ್ಟ ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಇಡೀ ಜಿಲ್ಲೆಯ ಜನತೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಬಯಲುಸೀಮೆಯ ಜನರ ಪಾಲಿಗೆ ಕೇವಲ ಯೋಜನೆಯಲ್ಲ, ಅದು ಬದುಕಿನ ಭರವಸೆ. ದಶಕಗಳಿಂದ ನೀರಿಗಾಗಿ ಕಾಯುತ್ತಿರುವ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳ ಜನರಿಗೆ ಇನ್ನೆಷ್ಟು ಭರವಸೆಗಳ ಭಾಷಣ ಮಾಡುತ್ತೀರಿ? ಇನ್ನೆಷ್ಟು ಕಾಲ ಕಾಮಗಾರಿಗಳ ವಿಳಂಬ, ತಾಂತ್ರಿಕ ನೆಪಗಳು ಮತ್ತು ರಾಜಕೀಯ ಹೇಳಿಕೆಗಳಲ್ಲೇ ಕಾಲ ಕಳೆಯುತ್ತೀರಿ? ಎಂದು ಡಾ.ಸುಧಾಕರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ನನ್ನ ನೇರ ಆಗ್ರಹ: • ಎತ್ತಿನಹೊಳೆ ಯೋಜನೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ, ನಿಗದಿತ ಫಲಾನುಭವಿ ಪ್ರದೇಶಗಳಿಗೆ ನೀರು ತಲುಪಿಸುವ ಸ್ಪಷ್ಟ ಕಾಲಮಿತಿಯನ್ನು ಪ್ರಕಟಿಸಿ. • ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ತಕ್ಷಣ ಆದ್ಯತೆ ನೀಡಿ. • ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತು ಪರಿಹಾರ ಕಲ್ಪಿಸಿ. • ಅಂತರ್ಜಲ ಕುಸಿತ ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ ಎಂದು ಸುಧಾಕರ್ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಯಲುಸೀಮೆಯ ಜನರಿಗೆ ಬೇಕಿರುವುದು ಭರವಸೆಗಳಲ್ಲ, ಫಲಿತಾಂಶ. ಘೋಷಣೆಗಳಲ್ಲ, ಎತ್ತಿನಹೊಳೆ ಯೋಜನೆ ಪೂರ್ಣವಾಗುವ ಗ್ಯಾರೆಂಟಿ! ಚಿಕ್ಕಬಳ್ಳಾಪುರದ ಜನರ ನೀರಿನ ಹಕ್ಕನ್ನು ಮತ್ತಷ್ಟು ವಿಳಂಬ ಮಾಡದೆ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಬಯಲುಸೀಮೆಯ ದಾಹಕ್ಕೆ ಶಾಶ್ವತ ಪರಿಹಾರ ಸಿಗಲೇಬೇಕು! ಎಂದು ಡಾ.ಸುಧಾಕರ್ ಆಗ್ರಹಿಸಿದ್ದಾರೆ.




