www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಾಯಾಘಾತಕ್ಕೊಳಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪು ಚಿಕಿತ್ಸೆ ಫಲಕಾರಿಯಾಗದೆ ಇಹ ಲೋಕ ತ್ಯಜಿಸಿದ್ದಾರೆ.
ಸುದ್ದಿ ತಿಳಿದ ಅಪ್ಪು ಅಭಿಮಾನಿಗಳು ಆಸ್ಪತ್ರೆಯತ್ತ ರಂಪಾಟ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಪತ್ನಿ. ಇಬ್ಬರು ಪುತ್ರಿಯರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. 46 ವರ್ಷದ ಪವರ್ ಸ್ಟಾರ್ ಇಂದು ಬೆಳಗ್ಗೆ 11.30ರ ಸುಮಾರಿಗೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥರಾಗಿದ್ರು. ಇದನ್ನು ಕಂಡ ಕುಟುಂಬಸ್ಥರು ಕೂಡಲೇ ಅವರನ್ನ ಬೆಂಗಳೂರಿನ ರಮಣಶ್ರೀ ಆಸ್ಪತ್ರೆಗೆ ಕರೆದೊಯ್ದಿದ್ರು. ಅಲ್ಲಿ ಅವರಿಗೆ ಇಸಿಜಿ ಮಾಡಿದ ವೈದ್ಯರು ಹೃದಯಾಘಾತವಾಗಿರೋದನ್ನು ಖಚಿತಪಡಿಸಿದ್ರು. ಕೂಡಲೇ ತಡ ಮಾಡದ ಕುಟುಂಬಸ್ಥರು ಅವರನ್ನು ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಿದ್ರು.
ಐಸಿಯುನಲ್ಲಿ ಎಲ್ಲಾ ರೀತಿಯ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಅದಾಗಲೇ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಬದುಕುಳಿಯೋದು ಕಷ್ಟ ಅಂತ ತಿಳಿದಿತ್ತು. ಆದ್ರೆ ಕಡೆ ಕ್ಷಣದವರೆಗೂ ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ್ದ ವೈದ್ಯರ ಚಿಕಿತ್ಸೆಗೆ ನಟ ಪುನೀತ್ ಸ್ಪಂದಿಸಲಿಲ್ಲ. ಹೀಗಾಗಿ ವೈದ್ಯರ ಎಲ್ಲಾ ಪ್ರಯತ್ನ ವ್ಯರ್ಥವಾಯ್ತು. ಆಸ್ಪತ್ರೆ ವೈದ್ಯರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ ಅಂತ ಖಚಿತಪಡಿಸಿದ್ರು. ಇನ್ನು ನಟ ಪುನೀತ್ ವಿಕ್ರಂ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲೆಡೆಯಿಂದ ಅವರ ಅಭಿಮಾನಿಗಳು ಆಸ್ಪತ್ರೆಯೆದುರು ಜಮಾಯಿಸಿದ್ರು. ಒಂದು ಬಾರಿಯಾದ್ರೂ ಅಪ್ಪುರನ್ನು ನೋಡಬೇಕು ಅಂತ ಗಳ ಗಳನೆ ಕಣ್ಣೀರಿಡುತ್ತಿದ್ದಾರೆ. ಇನ್ನು ಯಾರೂ ನಿರೀಕ್ಷೆ ಮಾಡದ ಸುದ್ದಿ ತಿಳಿದ ಇಡೀ ಕರುನಾಡಿನ ಜನತೆ ಕಂಬನಿ ಮಿಡಿಯುತ್ತಿದೆ.