ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಅದನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇಂದು ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು. “ಪ್ರಾಸಿಕ್ಯೂಷನ್ ಸಾಕ್ಷ್ಯಗಳಲ್ಲಿ ಹೊಂದಾಣಿಕೆಯಿಲ್ಲ, ಘಟನೆಗೆ ಸಂಬಂಧಿಸಿದ ದೃಢವಾದ ಸಾಕ್ಷ್ಯಗಳಿಲ್ಲ. ನಾಲ್ಕು ವರ್ಷಗಳ ಬಳಿಕ ದಾಖಲಾಗಿರುವ ದೂರು ವಿಶ್ವಾಸಾರ್ಹವಲ್ಲ. ಸಂತ್ರಸ್ತೆಯ ಮೊಬೈಲ್ ಸಿಡಿಆರ್ ಮತ್ತು ಬಟ್ಟೆಗಳಂತಹ ಪ್ರಮುಖ ಸಾಕ್ಷ್ಯಗಳನ್ನು ಸರಿಯಾಗಿ ವಶಕ್ಕೆ ಪಡೆಯಲಾಗಿಲ್ಲ” ಎಂದು ವಾದಿಸಿದರು. ಹೀಗಾಗಿ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಆದರೆ ಹೈಕೋರ್ಟ್ ಪೀಠ, ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರ ದ್ವಿಪೀಠ ಪ್ರಾಸಿಕ್ಯೂಷನ್ ವಾದಕ್ಕಾಗಿ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ. ಆ ದಿನ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಈಗಿಗೂ ಜಾಮೀನು ಸಿಕ್ಕಿಲ್ಲ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

