ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶೋತ್ಸವ ಅಂದರೇ ಅದೊಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ಹಬ್ಬ. ಧಾರವಾಡ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅಚ್ಚು ಮೆಚ್ಚು ಹುಬ್ಬಳ್ಳಿಯ ಗಣೇಶೋತ್ಸವ. ಹುಬ್ಬಳ್ಳಿಯ ಗಣೇಶೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಹಾಗಿದ್ದರೇ ಬನ್ನಿ ಹುಬ್ಬಳ್ಳಿಯ ಗಣೇಶೋತ್ಸವದ ಸಿದ್ಧತೆ ನೋಡಿಕೊಂಡು ಬರೋಣ ಬನ್ನಿ..
ಹುಬ್ಬಳ್ಳಿ ಗಣೇಶೋತ್ಸವಕ್ಕೆ ಅದರದ್ದೇ ಆದ ವಿಶೇಷತೆ ಇದೆ. 3-4 ತಲೆಮಾರುಗಳಿಂದ ಮಣ್ಣಿನ ಗಣಪತಿಗಳನ್ನು ತಯಾರಿಸುವ ಹಲವು ಕುಟುಂಬಗಳು ಇಲ್ಲಿವೆ. ಹೊಸೂರು 2ನೇ ಕ್ರಾಸ್, ಬಮ್ಮಾಪುರ ಓಣಿ, ಹಳೇಹುಬ್ಬಳ್ಳಿಯ ಅರವಿಂದ ನಗರ ಹಾಗೂ ಮರಾಠ ಗಲ್ಲಿಗಳಲ್ಲಿ ಈಗ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕುಟುಂಬಗಳು ಹಗಲು ರಾತ್ರಿ ಕಾರ್ಯ ನಿರತವಾಗಿವೆ.
ಹೌದು.. ಹೊಸೂರು- 2ನೇ ಕ್ರಾಸ್‌ನಲ್ಲಿ 8-10 ಕುಟುಂಬಗಳು ಗಣೇಶನನ್ನು ತಯಾರಿಸುವ ಪರಂಪರೆ ಮುಂದುವರಿಸಿವೆ. ಮೂರ್ತಿ ತಯಾರಕರು, ಯುಗಾದಿಯಲ್ಲೇ ಮಣ್ಣು ತಂದು ಪೂಜೆ ಮಾಡಿ ಮೂರ್ತಿ ಮಾಡುವುದಕ್ಕೆ ಶುರು ಮಾಡುತ್ತಾರೆ. ಹಬ್ಬಕ್ಕೆ ಒಂದು ತಿಂಗಳು ಇದೆ ಎನ್ನುವಾಗ ಬಣ್ಣ ಹಚ್ಚುವುದು ಹಾಗೂ ಅಂತಿಮ ಸ್ಪರ್ಶದ ಕಾರ್ಯ ನಡೆಯುತ್ತದೆ.
ಇನ್ನೂ ನಂದಿ ವಾಹನ, ಸಿಂಹವಾಹನ, ಪುಷ್ಪವಾಹನ, ಎಲೆ ವಾಹನ, ನವಿಲು ವಾಹನ, ಚಂದ್ರನ ಮೇಲೆ ಆಸೀನ, ಚಂದನ ಲೇಪಿತ, ಸಿಂಹಾಸನಾರೂಢ, ಸಾಯಿಬಾಬಾ ಗಣೇಶ, ಇಡಗುಂಜಿ ಗಣೇಶ, ಕೃಷ್ಣರೂಪಿ ಗಣಪ, ಬಾಲಗಣಪ ಹೀಗೆ ಹಲವು ವೈವಿಧ್ಯ ರೂಪಗಳಲ್ಲಿ ಗಣನಾಯಕ ಮೈದಳೆದಿದ್ದಾನೆ. ಪರಿಸರಸ್ನೇಹಿ ಗಣೇಶನಿಗೂ ಸಾಕಷ್ಟು ಬೇಡಿಕೆ ಇದೆ.
ಮೂರ್ನಾಲ್ಕು ತಲೆಮಾರಿನಿಂದ ಕೆಂಪು ಬಣ್ಣದ ಗಣೇಶ ಮೂರ್ತಿ ತಯಾರಿಸುವುದು ಬಮ್ಮಾಪುರ ಓಣಿಯ ಗಣಪತಿ ಮೂರ್ತಿ ತಯಾರಕರ ವಿಶೇಷ. ನಗರದ ಕೆಲವು ಮನೆತನಗಳಲ್ಲಿ ಕೆಂಪು ಗಣೇಶನನ್ನೇ ಇಟ್ಟು ಪೂಜಿಸುವುದು ಸಂಪ್ರದಾಯ. ಒಟ್ಟಿನಲ್ಲಿ ಹುಬ್ಬಳ್ಳಿಯ ಗಣೇಶೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಿದ್ಧತೆ ಜೋರಾಗಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ