ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಸಂಜೆ ಕೇರಳದ ನಾಲ್ಕು ದಿನಗಳ ಪ್ರವಾಸಕ್ಕಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬುಧವಾರ ಅಕ್ಟೊಬರ್ 22 ರಂದು ರಾಷ್ಟ್ರಪತಿಗಳು ಪತ್ತನಂತಿಟ್ಟುವಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಮುರ್ಮು ಅವರ ಆಗಮನ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಭದ್ರತಾ ಸಿದ್ಧತೆಗಳನ್ನು ಬಲಪಡಿಸಲಾಗಿದೆ. ಹೀಗಂತ TDB ಈ ಬಗ್ಗೆ ಮಾಹಿತಿ ನೀಡಿದೆ.
ರಾಷ್ಟ್ರಪತಿ ಅವರು ಬೆಳಗ್ಗೆ 10 ಗಂಟೆಗೆ ನೀಲಕ್ಕಲ್ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಪಂಬಾ ತಲುಪಲಿದ್ದಾರೆ. ಪಂಬಾದಿಂದ ಸನ್ನಿಧಾನಂವರೆಗೆ ವಿಶೇಷ ಗೂರ್ಖಾ ತುರ್ತು ವಾಹನ ಮತ್ತು ಆರು ಬೆಂಗಾವಲು ವಾಹನಗಳೊಂದಿಗೆ ಪ್ರಯಾಣ ಮಾಡಲಿದ್ದಾರೆ.
ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಆರತಿ ಸೇವೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭದ್ರತಾ ದೃಷ್ಟಿಯಿಂದ ಕ್ಷಿಪ್ರ ಕಾರ್ಯದಳ, ಶ್ವಾನ ದಳ, ಅಡ್ವಾನ್ಸ್ ಪೆಟ್ರೋಲಿಂಗ್ ತಂಡಗಳು ಪೂರ್ವ ತಪಾಸಣೆ ನಡೆಸಿವೆ. ಮಾರ್ಗದಲ್ಲಿನ ವಾಹನ ಸಂಚಾರಕ್ಕೆ ಮಧ್ಯಾಹ್ನ 3 ಗಂಟೆಯಿಂದಲೇ ನಿರ್ಬಂಧ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ರಾಷ್ಟ್ರಪತಿ ಅವರು ಅಕ್ಟೊಬರ್ 23 ಗುರುವಾರದಂದು ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ವರ್ಕಳದ ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದಲ್ಲಿನ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.
ಅಕ್ಟೋಬರ್ 24 ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಅವರ ಪ್ರವಾಸದ ಮಾಹಿತಿಯನ್ನು PIB ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ

