www.karnatakatv.net : ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಅಚ್ಚರಿಯ ಭೇಟಿ ನೀಡಿದ್ದಾರೆ ಎಂದು ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ತಿಳಿಸಿವೆ.
ಎರಡು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಸಿನೋ-ಇಂಡಿಯಾ ಗಡಿಯ ಸಮೀಪವಿರುವ ನೈಂಗ್ಚಿಯಲ್ಲಿ ಈ ಭೇಟಿ ನಡೆದಿದೆ ಎಂದು ಕೂಡಾ ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ಹೇಳಿದೆ. ಬುಧವಾರ ನಿಂಗ್ಚಿಗೆ ಬಂದಿಳಿದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಗುರುವಾರ ಲಾಸಾಗೆ ಭೇಟಿ ನೀಡಿದ್ದಾರೆ. ಚೀನಾದ ಅಧ್ಯಕ್ಷರು ಒಂದು ದಶಕಕ್ಕೂ ಅಧಿಕ ಸಮಯದ ನಂತರ ಟಿಬೆಟಿಯನ್ ರಾಜಧಾನಿಗೆ ಭೇಟಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕಿನಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಧಾನ ಕಾರ್ಯದರ್ಶಿ ಕ್ಸಿ, ನೈಂಗ್ಚಿಯಲ್ಲಿನ ನಿವಾಸಿಗಳಿಗೆ ಟಿಬೆಟಿಯನ್ ಸಂಪ್ರದಾಯದಲ್ಲಿ ತಾಶಿ ಡೆಲೆಕ್ ಎಂದು ಶುಭಾಶಯ ಕೋರಿದ್ದಾರೆ. ಕ್ಸಿ ನಂತರ ಉತ್ತಮ ಭವಿಷ್ಯದ ಬಗ್ಗೆ ನಂಬಿಕೆ ಇಡಬೇಕೆಂದು ಕರೆ ನೀಡಿದ್ದಾರೆ.

ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬಿಡುಗಡೆ ಮಾಡಿದ ಸಂಕ್ಷಿಪ್ತ ವರದಿಯ ಪ್ರಕಾರ, ಕ್ಸಿ ಬುಧವಾರ ನೈಂಗ್ಚಿ ಮೈನ್‌ಲಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸ್ಥಳೀಯ ಜನರು ಮತ್ತು ವಿವಿಧ ಜನಾಂಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್‌ರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

