ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಶ್ರದ್ಧಾಂಜಲಿ

ಬೆಂಗಳೂರು:

ಕನ್ನಡದ ಹಿರಿಯ ವಿದ್ವಾಂಸರು, ಸಾಹಿತ್ಯ ಮತ್ತು ಕಲಾ ವಿಮರ್ಶಕರು, ಕಲಾ ಪೋಷಕರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು, ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವಾಧ್ಯಕ್ಷರು ಆದ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರ ಅಗಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಮತ್ತು ಕಲಾ ವಿಮರ್ಶೆ ಕ್ಷೇತ್ರದಲ್ಲಿ ಅತ್ಯಂತ ಶಿಸ್ತಿನ ಕಾರ್ಯನಿರ್ವಹಣೆಗೆ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರು ಹೆಸರಾಗಿದ್ದರು. ಕನ್ನಡದ ಮಹತ್ವದ ಕೃತಿಗಳನ್ನು ರಚಿಸಿದವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದ ಸಾವಿರಾರು ಅಭ್ಯರ್ಥಿಗಳನ್ನು ಸಜ್ಜುಗೊಳಿಸಿದ ಹೆಗ್ಗಳಿಕೆ ಅವರದು. ಕೋಲಾರ, ಮಂಗಳೂರು, ಬೆಂಗಳೂರು, ಇತರ ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರವೂ ಸಾಹಿತ್ಯ ಮತ್ತು ಕಲಾ ಸೇವೆಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಪ್ರೊ. ಎಂ.ಎಚ್. ಕೃಷ್ಣಯ್ಯನವರು ತಮಗೆ ಆತ್ಮೀಯರಾಗಿದ್ದು, ಸಾಹಿತ್ಯ ಚಟುವಟಿಕೆಗಳ ಕುರಿತು ಮಾರ್ಗದರ್ಶನವನ್ನು ನೀಡುತ್ತಿದ್ದರು. ಅವರ ಅಗಲಿಕೆಯಿಂದಾಗಿ ಕನ್ನಡ ನುಡಿ ಮತ್ತು ಕಲಾ ಜಗತ್ತಿನ ಬಹುಮುಖ್ಯ ಕೊಂಡಿ ಕಳಚಿದಂತಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

BREAKING NEWS: ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ. ಎಚ್ ಕೃಷ್ಣಯ್ಯ ನಿಧನ

About The Author