ಹುಬ್ಬಳ್ಳಿ: ಅಂಜುಮನ್ ಇಸ್ಲಾಂ ಸಂಸ್ಥೆಯವರು ದೇಶದ್ರೋಹಿಗಳು, ಹಿಂದೂ ಸಮಾಜವನ್ನು ಕೆಣಕಿದರೇ ಮುಂದೆ ಮಸೀದಿ ಒಳಗಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ಬಾಯಿ ಹರಿಬಿಟ್ಟಿದ್ದಾರೆ.
ನಗರದ ಈದ್ಗಾ ಮೈದಾನದಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶ ಪ್ರತಿಷ್ಠಾಪನೆಯಿಂದ ಪರಿಶುದ್ದವಾಗಿದೆ. ಅತ್ಯಂತ ಶಾಂತ ರೀತಿಯಿಂದ ಮೂರನೇ ದಿನ ಗಣೇಶ ಪೂಜೆ ಸಲ್ಲಿಸಿ, ವಿಸರ್ಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಇದೇ ಮಾದರಿಯಲ್ಲಿ ಹಿಂದೂ ಸಮಾಜದಿಂದ ಗಣೇಶ ಹಬ್ಬ ಆಚರಣೆ ಮಾಡಲಾಗುವುದು ಎಂದರು.
ಇವತ್ತು ಹುಬ್ಬಳ್ಳಿ ಈದ್ಗಾ ಮೈದಾನ ಶುದ್ಧೀಕರಣ ಆಗಿದೆ. ಯಾರು ಶತ್ರುಗಳು, ಅಧರ್ಮಿಯರು, ದೇಶದ್ರೋಹಿಗಳು ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಇದೀಗ ಗಣೇಶ ಉತ್ಸವಕ್ಕೆ ವಿರೋಧ ಮಾಡಿದವರಿಗೆ ತೀವ್ರವಾದ ಮುಖಭಂಗ ಆಗಿದೆ. ಅವರನ್ನು ಮೆಟ್ಟಿ ಇವತ್ತು ಗಣೇಶ ಪ್ರತಿಷ್ಠಾಪನೆ ಮಾಡಿ ತೋರಿಸಿದ್ದೇವೆ ಎಂದರು.
ಸರ್ಕಾರ, ಪೋಲಿಸ್ ಇಲಾಖೆಗೆ ಯಾರು ಗಲಭೆಕೋರರು, ಯಾರು ಪ್ರಚೋದನೆ ಕೊಡುವವರು ಎಂಬುದು ಗೊತ್ತಾಗಿದೆ. ಈ ಹಿಂದೆ ಅಂಜುಮನ್ ಇಸ್ಲಾಂ ಸಂಸ್ಥೆಯವರು ರಾಷ್ಟ್ರಧ್ವಜ ಧ್ವಜಾರೋಹಣ ಮಾಡಲು ವಿರೋಧ ಮಾಡಿದ್ದರು. ಅವರು ದೇಶದ್ರೋಹಿಗಳು, ಇಂದು ಹಿಂದೂ ಧರ್ಮಕ್ಕೆ, ಸಂಪ್ರದಾಯಕ್ಕೆ ವಿರೋಧ ಮಾಡೋದಕ್ಕೆ ಕೈ ಹಾಕಿದ್ರು ಇವತ್ತು ಅದನ್ನು ಮೆಟ್ಟಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದೇವೆ. ಮುಂದೆಯೂ ಹಿಂದೂ ಸಮಾಜವನ್ನು ಕೆಣಕಿದರೇ, ಧರ್ಮ, ದೇಶದ ವಿಚಾರ ಕೆಣಕಿದರೇ ಮಸೀದಿ ಒಳಗಡೆ ಗಣೇಶ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಾಗ ಕೋರ್ಟ್ ಗೆ ಹೋಗಿ ತೊಂದರೆ ಕೊಟ್ಟಿದ್ದೀರಿ, ಮುಂದೆ ನೀವು ನಮಾಜ್ ಮಾಡುವಾಗ ನಮಗೂ ಕೋರ್ಟ್’ಗೆ ಹೋಗುವ ಹಕ್ಕಿದೆ. ನಾವು ಹೋರಾಟ ಮಾಡುತ್ತೇವೆ ಎಂದರು.
Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!