ಮಂಡ್ಯ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಡ್ಯದಲ್ಲಿಂದು ಪ್ರತಿಭಟನೆ ನಡೆಸಲಾಗಿದ್ದು, ಮಾಜಿ ಸಚಿವ ಹಾಗೂ ಶಾಸಕ ಸಿಎಸ್ ಪುಟ್ಟರಾಜು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆದಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಾಕಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪುಟ್ಟರಾಜು ಕೂಡ ಪ್ರತಿಭಟನಾಕಾರರ ಜೊತೆ ಧರಣಿ ಕುಳಿತರು.
ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ರೈತ ವಿರೋಧಿ ನೀತಿಯನ್ನ ರಾಜ್ಯ ಸರ್ಕಾರ ತರಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಈ ನೀತಿಯನ್ನ ಹಿಂಪಡೆಯುವಂತೆ ಒತ್ತಾಯಿಸಿದರು. ಶಾಸಕ ಸಿಎಸ್ ಪುಟ್ಟರಾಜು ಹಾಗೂ ಡಿಸಿ ಮೂಲಕ ಸಿಎಂಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪುಟ್ಟರಾಜು, ಇವತ್ತು ಕರ್ನಾಟಕ ಸರ್ಕಾರ ಭೂಕಾಯ್ದೆಯಡಿ ತಿದ್ದುಪಡಿ ತಂದು, ಯಾರು ಬೇಕಾದ್ರೂ ಜಮೀನನ್ನು ಕೊಳ್ಳುವ ವ್ಯವಸ್ಥೆಗೆ ಬುನಾದಿ ಹಾಕುತ್ತಿದೆ. ಆ ನಿಟ್ಟಿನಲ್ಲಿ ಈಗಾಗಲೇ ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ನಮ್ಮ ನಾಯಕರಾದಂಥ ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ಮಾಡಿದ್ದೇವೆ. ಇವತ್ತು ನಮ್ಮ ರೈತರು ಇಡೀ ರಾಜ್ಯದಲ್ಲಿ ಜಾಗೃತಿ ಮೂಡಿಸಿ ಹೋರಾಟ ಮಾಡುತ್ತಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ನಿಂತು ರೈತರೊಂದಿಗೆ ನಾವೆಲ್ಲ ಶಾಸಕರು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ
