ನೀವು ರಾಜೀನಾಮೆಗೆ ಸಜ್ಜಾಗಿ – ಆರ್‌. ಅಶೋಕ್ ಸ್ಫೋಟಕ ಹೇಳಿಕೆ!

ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಹೊಸ ಬಾಂಬ್ ಸಿಡಿದಿದೆ! ಎಸ್ ‘ವಾಲ್ಮೀಕಿ ಹಗರಣದ ಬೆನ್ನಲ್ಲೇ, ಈಗ ಕೆಪಿಎಸ್‌ಸಿ ಹಗರಣದ ಸರದಿ ಬಂದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯೂ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದಂತೆ, ಮುಂಬರುವ ದಿನಗಳಲ್ಲಿ ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯೂ ಪಕ್ಕಾ ಆಗ್ಬೇಕು ಅಂತಾ ಆಗ್ರಹಿಸಿದ್ದಾರೆ.

ಕೇವಲ ಒಬ್ಬ ಐಎಎಸ್ ಅಧಿಕಾರಿಯನ್ನು ಬಂಧಿಸಿದರೆ ಈ ಹಗರಣ ಮುಗಿಯಲ್ಲ. ಕೆಪಿಎಸ್‌ಸಿ ಅಧ್ಯಕ್ಷರ ಪ್ರಭಾವ ಬಳಸಿ ನಡೆದಿರುವ ಈ ನೇಮಕಾತಿ ದಂಧೆಯ ಹಿಂದೆ ದೊಡ್ಡವರೇ ಇದ್ದಾರೆ. ಇದರ ಆಳ-ಅಗಲಕ್ಕೆ ಇಳಿದ್ರೆ ಸರ್ಕಾರದಲ್ಲಿ ಇನ್ನೂ ಹಲವು ವಿಕೆಟ್‌ಗಳು ಬೀಳೋದು ಗ್ಯಾರಂಟಿ, ಅದ್ರಲ್ಲೂ ಪ್ರಿಯಾಂಕ್ ಖರ್ಗೆ ಅವರ ವಿಕೆಟ್ ಮೊದಲು ಬೀಳಲಿದೆ ಅಂತಾ ಅಶೋಕ್ ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೂ ಖಂಡಿಸಿರುವ ಅವರು, ರಾಯರೆಡ್ಡಿ ಅವರಿಗೆ ಬೇರೆ ಧರ್ಮಗಳ ಬಗ್ಗೆ ಗೌರವವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಂಥ ಹೇಳಿಕೆ ಕೊಡುವವರು ಸಚಿವ ಸಂಪುಟದಲ್ಲಿ ಇರೋಕೆ ಅರ್ಹರಲ್ಲ, ತಕ್ಷಣ ಅವರಿಂದಲೂ ಸಹ ರಾಜೀನಾಮೆ ಪಡೆಯಬೇಕು ಅಂತಾ ಆಗ್ರಹಿಸಿದರು.

ಒಟ್ಟಿನಲ್ಲಿ, ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪಗಳು ಜೋರಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡೋಣ.

About The Author