ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ 22 ಮಕ್ಕಳನ್ನು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯ ನಂತರ, ಭಾರತದ ಸಶಸ್ತ್ರ ಪಡೆಗಳು ಮೇ 7ರಂದು ಆಪರೇಷನ್ ಸಿಂಧೂರ್ ಆರಂಭಿಸಿದ್ದರು. ಈ ಮಿಲಿಟರಿ ಕಾರ್ಯಾಚರಣೆ ಪಾಕಿಸ್ತಾನ ಮತ್ತು ಪಿಒಕೆನ 9 ಭಯೋತ್ಪಾದಕ ನೆಲೆಗಳ ಧ್ವಂಸ ಮಾಡಲಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸೇನೆ ನಿಯಂತ್ರಣ ರೇಖೆ ಉದ್ದಕ್ಕೂ ಭಾರಿ ಶೆಲ್ ದಾಳಿ ನಡೆಸಿತು.
ಈ ದಾಳಿಗಳ ಪರಿಣಾಮವಾಗಿ ಪೂಂಚ್ ಜಿಲ್ಲೆಯಲ್ಲಿ ಮಾತ್ರ 13 ಜನ ನಾಗರಿಕರು ಸಾವಿಗೀಡಾಗಿದ್ದರು. ಇದರಲ್ಲಿ ಹಲವಾರು ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದರು. ಈ ಮಕ್ಕಳ ಯೋಗಕ್ಷೇಮದ ಜವಾಬ್ದಾರಿ ಯಾರದು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿಯವರು ಉತ್ತರ ನೀಡಿದ್ದಾರೆ.
ಈ ಭೀಕರ ಘಟನೆಯ ನಂತರ ರಾಹುಲ್ ಗಾಂಧಿ ಅವರು ಖುದ್ದಾಗಿ ಪೂಂಚ್ ಜಿಲ್ಲೆಗೆ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಅವರು ತಕ್ಷಣವೇ ಪೋಷಕರಿಲ್ಲದೆ ಉಳಿದ ಮಕ್ಕಳ ಪಟ್ಟಿಯನ್ನು ತಯಾರಿಸಲು ಸ್ಥಳೀಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾಗೆ ಸೂಚಿಸಿದರು.
ಪೋಷಕರಿಬ್ಬರನ್ನೂ ಕಳೆದುಕೊಂಡ ಮಕ್ಕಳು ಪದವಿ ಶಿಕ್ಷಣವರೆಗೆ ಓದಬೇಕು. ಅವರ ಭವಿಷ್ಯವನ್ನು ನಾವು ಕಾಯ್ದುಕೊಳ್ಳಬೇಕು. ಆ ಮಕ್ಕಳು ದೇಶದ ಇತರ ಮಕ್ಕಳಂತೆ ಬೆಳೆಯಬೇಕು ಎಂಬುದೇ ನನ್ನ ಆಸೆ, ಎಂದಿದ್ದಾರೆ. ಈ 22 ಮಕ್ಕಳ ಶೈಕ್ಷಣಿಕ, ಆರ್ಥಿಕ ಮತ್ತು ಮನೋವೈಜ್ಞಾನಿಕ ಸಹಾಯಕ್ಕಾಗಿ ಅವರು ಪ್ರತಿಷ್ಠಿತ ಸಂಸ್ಥೆಗಳ ಜೊತೆಗಿನ ಒಡಂಬಡಿಕೆಯನ್ನು ಕೂಡ ಆರಂಭಿಸಿದ್ದಾರೆ.

