ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾತ್ರ ನೋ ರೆಸ್ಪಾನ್ಸ್! ಇದೀಗ ಗ್ರಾಮಸ್ಥರು ಆಡಳಿತದ ವಿರುದ್ಧ ಸಿಡಿದೆದ್ದಿದ್ದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ಹೋಗಿದ್ರೆ ಸಿಬ್ಬಂದಿ ಸಿಗೋದಿಲ್ಲ, ಕೆಲಸ ಹೇಳಿದ್ರೆ ನಾಳೆ ಬನ್ನಿ ಅಂತ ಟೈಮ್ ಪಾಸ್ ಮಾಡ್ತಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಕೆಲವೆಡೆ ಜನರು ಪ್ರತಿಭಟನೆಗೂ ಇಳಿದಿದ್ದು, ʼಗ್ರಾಮ ಪಂಚಾಯಿತಿ ಹೆಸರಿಗಷ್ಟೇ ಇದೆʼ ಅಂತ ಕಿಡಿಕಾರಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರ ಜೀವನವೇ ಅಸ್ತವ್ಯಸ್ತವಾಗಿದೆ. ಕುಡಿಯುವ ನೀರಿಗಾಗಿ ಮಹಿಳೆಯರು ಕಿಲೋಮೀಟರ್‌ಗಳಷ್ಟು ನಡೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. ಇನ್ನೊಂದೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಸ್ಪರ ಹೊಣೆ ತಪ್ಪಿಸಿಕೊಳ್ಳುತ್ತಿದ್ದು, ಸಮಸ್ಯೆ ಮಾತ್ರ ಪರಿಹಾರ ಸಿಗದೇ ಅಲ್ಲೇ ಸ್ಟಕ್ ಆಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ಈಗ ಗ್ರಾಮೀಣ ಆಡಳಿತದ ಕಾರ್ಯವೈಖರಿಯ ಮೇಲೆಯೇ ದೊಡ್ಡ ಪ್ರಶ್ನೆ ಎಬ್ಬಿಸಿದೆ. ʼಸರ್ಕಾರದ ಯೋಜನೆಗಳು ಕಾಗದದಲ್ಲಿ ಮಾತ್ರನಾ?ʼ ಅನ್ನೋ ಪ್ರಶ್ನೆ ಈಗ ಗ್ರಾಮಸ್ಥರ ಬಾಯಲ್ಲಿ ಕೇಳಿಬರುತ್ತಿದೆ.




