ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಂದು ರೈಲ್ವೆ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (DRUCC) ಎರಡನೇ ಸಭೆಯನ್ನು ನಡೆಸಿತು. ಡಿವಿಜನಲ್ ರೈಲ್ವೆ ಮ್ಯಾನೇಜರ್ ಹಾಗೂ ಸಮಿತಿಯ ಪದನಿಮಿತ್ತ ಅಧ್ಯಕ್ಷರಾದ ಶ್ರೀ ಯೋಗೇಶ್ ಮೋಹನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಸದರು ಮತ್ತು ಶಾಸಕರಿಂದ ಹಾಗೂ ಚೇಂಬರ್ ಆಫ್ ಕಾಮರ್ಸ್, ಗ್ರಾಹಕ ಸಂರಕ್ಷಣಾ ಸಂಸ್ಥೆ, ಪ್ರಯಾಣಿಕರ ಸಂಘ ಇತ್ಯಾದಿ ಸಂಸ್ಥೆಗಳಿಂದ ನಾಮನಿರ್ದೇಶಿತರಾದ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀ ಯೋಗೇಶ್ ಮೋಹನ್ ಕಳೆದ ಒಂದು ವರ್ಷದ ವಿಭಾಗದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಕರ್ಯಗಳನ್ನು ಸುಧಾರಿಸಲು ರೈಲುಗಳಲ್ಲಿ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಲು ಮತ್ತು ವಿಭಾಗದ ಪಾರ್ಸೆಲ್ ಆದಾಯವನ್ನು ಹೆಚ್ಚಿಸಲು ಸಲಹೆಗಳನ್ನು ನೀಡುವಂತೆ ಅವರು ಸದಸ್ಯರಿಗೆ ಕರೆ ನೀಡಿದರು.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಲಹಾ ಸಮಿತಿಯ ಕಾರ್ಯದರ್ಶಿ ಡಾ.ಎ.ಎನ್. ಕೃಷ್ಣಾ ರೆಡ್ಡಿ ಪವರ್ ಪಾಯಿಂಟ್ ತಂತ್ರಾಂಶದ ಮೂಲಕ ಬೆಂಗಳೂರು ವಿಭಾಗದ ಸಾಧನೆಗಳನ್ನು ವಿವರಿಸಿದರು .
ಪ್ರಯಾಣಿಕರ ಸೌಕರ್ಯಗಳು, ರೈಲು ಸೇವೆಗಳು, ಕೈಗೊಂಡ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ವೇದಿಕೆಯಲ್ಲಿ ಚರ್ಚಿಸಲಾಯಿತು.




