ಧರ್ಮಸ್ಥಳದ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಬ್ಬ ವ್ಯಕ್ತಿ ನ್ಯಾಯಾಲಯದ ಮುಂದೆ ಬಂದು ವಿಚಿತ್ರ ಹೇಳಿಕೆ ನೀಡಿರೋದು ಸಂಚಲನ ಸೃಷ್ಟಿಸಿದೆ. ಆ ವ್ಯಕ್ತಿ ನಾನು ಬಹುಕಾಲದಿಂದ ಧರ್ಮಸ್ಥಳದ ಸುತ್ತಾ ಹಲವು ಶವಗಳನ್ನು ಹೂತಿದ್ದೇನೆ. ಅವುಗಳನ್ನು ಹೊರತೆಗೆಯಲು ಅವಕಾಶ ಕೋರಿದ್ದಾರೆ. ಈ ಹೇಳಿಕೆ ಈಗ ರಾಜ್ಯವ್ಯಾಪಿ ಸಂಚಲನ ಹುಟ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದಂತೆ, ಹಲವರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಎಕ್ಸ್ ಖಾತೆಯಲ್ಲಿ ಮೊದಲ ಬಾರಿಗೆ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.
ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ನಾಪತ್ತೆಯಾದ ಮಹಿಳೆಯರ ಬಗ್ಗೆ ಕೇಳಿದಾಗ ನಾನು ಆಘಾತಕ್ಕೊಳಗಾದೆ. ಧರ್ಮಸ್ಥಳ ಒಂದು ಪವಿತ್ರ ಸ್ಥಳ. ಕರ್ನಾಟಕದ ಜನರು ಈ ಪೂಜ್ಯ ಸ್ಥಳವನ್ನು ಹೆಚ್ಚು ಗೌರವಿಸುತ್ತಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಯಬೇಕು. ನಾವು ಸತ್ಯವನ್ನು ತಿಳಿದುಕೊಳ್ಳಲೇಬೇಕು ಅಂತ ನಟಿ ರಮ್ಯಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ.
ಧರ್ಮಸ್ಥಳ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದರು. ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದು. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಂತರ ಎಸ್‌ಐಟಿ ರಚನೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ. ರಾಜ್ಯ ಮಹಿಳಾ ಆಯೋಗ ಕೂಡ ಧರ್ಮಸ್ಥಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಪತ್ರ ಬರೆದು – ಕಳೆದ 20 ವರ್ಷಗಳಲ್ಲಿ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ? ಎಷ್ಟು ಪ್ರಕರಣಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ? ಹೀಗಾಗಿ ಎಸ್‌ಐಟಿ ರಚನೆಯಾಗಬೇಕು ಎಂದು ಒತ್ತಾಯಿಸಿದೆ.