ರಿಯಲ್ ಸ್ಟಾರ್ ಉಪ್ಪೇಂದ್ರ ಫಿಟ್ನೆಸ್‌ ಟ್ರೈನರ್‌ ಸಾವು

ಖ್ಯಾತ ನಟ, ನಟಿಯರಿಗೆ ಫಿಟ್ನೆಸ್‌ ಟ್ರೈನಿಂಗ್‌ ಕೊಡ್ತಿದ್ದ, ಕೋಲಾರ ಮೂಲದ ಫಿಟ್ನೆಸ್‌ ಟ್ರೈನರ್‌, ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೋಲಾರದ ಗಾಂಧಿನಗರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್, ಹಾಗೂ ಮಾಡೆಲ್​ ಸುರೇಶ್ ಕುಮಾರ್, ಅಮೆರಿಕಾದಲ್ಲಿ ನೆಲೆಸಿದ್ರು.

ಕಳೆದ 4 ದಿನಗಳ ಹಿಂದೆ ಪ್ಲೋರಿಡಾದಿಂದ ಟೆಕ್ಸಾಸ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಕಾರು​ ಅಪಘಾತದ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಸುರೇಶ್‌ ಅವ್ರನ್ನ, ಅಮೆರಿಕಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್​ಸೆ ಫಲಕಾರಿಯಾಗದೆ ಸುರೇಶ್ ಮೃತಪಟ್ಟಿದ್ದಾರೆ. ಅಪಘಾತದ ಕುರಿತು ತನಿಖೆ ನಡೆಸಿದ ನಂತರ ಸುರೇಶ್‌ ಕುಮಾರ್‌ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಭಾರತಕ್ಕೆ ಸುರೇಶ್‌ಕುಮಾರ್ ಮೃತದೇಹ ತರಲು, ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

42 ವರ್ಷದ ಸುರೇಶ್ ಕುಮಾರ್ ಹುಟ್ಟಿ ಬೆಳೆದಿದ್ದು ಕೋಲಾರದ ಗಾಂಧಿನಗರದಲ್ಲಿ. ಗಾಂಧಿನಗರದ ಚಲಪತಿ ಮುನಿಯಮ್ಮ ದಂಪತಿಯ ಮೊದಲ ಮಗನಾಗಿ ಬಡಕುಟುಂಬದಲ್ಲಿ ಜನಿಸಿದ್ರು. ಸುರೇಶ್​ ಕೋಲಾರದಲ್ಲೇ ಕೆಲಕಾಲ ನೆಲೆಸಿದ್ದರು. ಆದರೆ, ಸಾಧನೆಯ ಹಠದೊಂದಿಗೆ ಬೆಂಗಳೂರು ಸೇರಿದ್ದ ಸುರೇಶ್,​ ಬಾಡಿಬಿಲ್ಡರ್ ಆಗಿ ವೃತ್ತಿ ಜೀವನ ಆರಂಭಿಸಿದ್ರು. ಬಳಿಕ ಉಪೇಂದ್ರ ಸೇರಿದಂತೆ ಹಲವಾರು ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ರು. ದೇಹಸೌಂದರ್ಯದಿಂದಲೇ ಆಕರ್ಷಿತರಾಗಿದ್ದ ಸುರೇಶ್ ಕುಮಾರ್, ನಟಿಯರಾದ ಪ್ರೇಮಾ, ಪ್ರಿಯಾಮಣಿ ಸೇರಿದಂತೆ ಹಲವರ ಜೊತೆ, ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಉಪೇಂದ್ರ ಅಭಿನಯದ ಉಪ್ಪಿ2 ಸಿನಿಮಾದಲ್ಲೂ ಕೂಡಾ ಕಾಣಿಸಿಕೊಂಡಿದ್ದರು. ದೆಹಲಿ ಮೂಲದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಸುರೇಶ್ ಕುಮಾರ್‌ಗೆ, ಇಬ್ಬರು ಮಕ್ಕಳು ಇದ್ದಾರೆ. ಹಲವು ವರ್ಷಗಳ ಕಾಲ ಲಂಡನ್‌ನಲ್ಲಿ, ನಂತರ ಕಳೆದ ಏಳು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದ ಸುರೇಶ್,​ ಆಗಾಗ್ಗೆ ಕೋಲಾರಕ್ಕೆ ಬಂದು ಹೋಗುತ್ತಿದ್ದರು.

ಅಮೆರಿಕಾದಲ್ಲಿ ಪಿಜಿಯೋಥೆರಪಿಸ್ಟ್​ ಆಗಿ ಕೆಲಸ ಮಾಡಿಕೊಂಡು, ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು. ಆಗಸ್ಟ್ 1ರಂದು ಕೋಲಾರಕ್ಕೆ ಬಂದಿದ್ದ ಸುರೇಶ್,​ ಆಗಸ್ಟ್​ 24ರಂದು ಅಮೆರಿಕಾಕ್ಕೆ ವಾಪಸ್​ ತೆರಳಿದ್ದರು. ಅಮೆರಿಕಾಗೆ ಹೋಗುವ ಮೊದಲು ತನ್ನ ಇಡೀ ಕುಟುಂಬಸ್ಥರಿಗೆ ಕೋಲಾರದ ಅಂತರಗಂಗೆಯ ರೆಸಾರ್ಟ್‌ನಲ್ಲಿ ಔತಣಕೂಟ ಏರ್ಪಡಿಸಿ, ಕುಟುಂಬಸ್ಥರೊಂದಿಗೆ ಕಾಲಕಳೆದು ಸಂತೋಷದಿಂದ ತೆರಳಿದ್ದರು. ಅಮೆರಿಕಾಗೆ ತೆರಳಿದ ಕೆಲವೇ ದಿನಗಳಲ್ಲಿ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆಘಾತ ಉಂಟು ಮಾಡಿದೆ.

About The Author