ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳವಾರ ರಾತ್ರಿ, ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ಪತ್ನಿ ಉಷಾ ಜೊತೆ ಶಕ್ತಿ ಸ್ವರೂಪಿಣಿ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಅಧಿಕಾರ ಹಂಚಿಕೆ ಚರ್ಚೆ ಬಿರುಸು ಪಡೆದುಕೊಂಡಿರುವ ಹೊತ್ತಲ್ಲೇ, ಹಾಸನಾಂಬೆ ಸನ್ನಿಧಿಯಲ್ಲಿ, ಡಿಕೆ ಕೈಗೊಂಡ ಪೂಜೆ ಹೊಸ ಚರ್ಚೆ ಹುಟ್ಟುಹಾಕಿದೆ.
ಸಿಎಂ ರೇಸ್‌ನಲ್ಲಿರುವ ಡಿಕೆಶಿ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ, ಸುಮಾರು 15 ನಿಮಿಷ ಕುಳಿತುಕೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಕ್ತಿಯುತವಾದ ನಾರಾಯಣಿ ನಮಸ್ಕಾರ ಮಂತ್ರ ಮತ್ತು ಖಡ್ಗಮಾಲಾ ಸ್ತ್ರೋತ್ರ ಪಠಿಸಿದ್ದಾರೆ. ನಾರಾಯಣಿ ನಮಸ್ಕಾರ ಮಂತ್ರ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದಲ್ಲಿ ಬರುವ ಮಂತ್ರವಾಗಿದೆ. ಇದು ಅತ್ಯಂತ ಪ್ರಬಲ ಪೂಜೆಯಾಗಿದ್ದು, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಚಂಡಿಕಾ ಹೋಮ ಮಾಡುವ ವೇಳೆ ಪಠಿಸುವ ಮಂತ್ರವಾಗಿದೆ. ಸುಮಾರು 5 ನಿಮಿಷಗಳ ಕಾಲ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರ ಪಠಿಸಿದ್ದಾರೆ.
ಅಷ್ಟೇ ಅಲ್ಲದೆ, ಶತ್ರುವಿನ ಮೇಲೆ ವಿಜಯದ ಸಂಕೇತವಾಗಿ ಮಾಡಿಸುವ ಪೂಜೆ ಇದಾಗಿದೆ. ಡಿಕೆಶಿ ಅವರ ಸೂಚನೆಯಂತೆಯೇ ಅರ್ಚಕರು ಸಂಕಲ್ಪ ವೇಳೆ ಅರ್ಚನೆ ಮಾಡಿ, ಈ ಸ್ತ್ರೋತ್ರದ ಮೂಲಕ ಪೂಜೆ ಮಾಡಿದ್ದಾರೆ. ಆಶ್ಚರ್ಯ ಅಂದ್ರೆ, ಮಂತ್ರ ಪಠಣೆಯಾಗುತ್ತಿದ್ದಂತೆ, 2 ಬಾರಿ ಹಾಸನಾಂಬೆ ದೇವಿ ಬಲಗಡೆಯಿಂದ ಹೂವಿನ ಪ್ರಸಾದ ಕೊಟ್ಟಿದ್ದಾರೆ.
ವಿಶೇಷ ಅಂದ್ರೆ, ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಕೂಡ ಹಾಸನಾಂಬೆ ದೇವಿ ದರ್ಶನ ಪಡೆದು, ಇದೇ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದರು. ಮುಡಾ ಹಗರಣದ ಸುಳಿಯಲ್ಲಿ ಸಿಲುಕಿದ್ದ ವೇಳೆ ಈ ಪೂಜೆ ಸಲ್ಲಿಸಿದ್ದರು. ನಂತರ ಮುಡಾ ಆರೋಪದಿಂದ ಮುಕ್ತರಾಗಿದ್ದು, ತನಿಖೆಯಲ್ಲಿ ಕ್ಲೀನ್‌ಚಿಟ್ ಸಿಕ್ಕಿತ್ತು. ಹೀಗಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಖಡ್ಗಮಾಲಾ ಸ್ತ್ರೋತ್ರದೊಂದಿಗೆ ಪೂಜೆ ಮಾಡಿಸಿರುವುದು ಕುತೂಹಲ ಮೂಡಿಸಿದೆ.