ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಜೋರಾಗಿದೆ. ಕಾಂಗ್ರೆಸ್ ಸಂಸದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರೆಡ್ಡಿಯವರ ಹೇಳಿಕೆ, ಕೇವಲ ಉಹಾಪೋಹ ಮತ್ತು ಕಟ್ಟುಕತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಯಾವುದೇ ರಾಜ್ಯ ಸರ್ಕಾರಕ್ಕೆ ಹೇಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.
ಜನಾರ್ದನ ರೆಡ್ಡಿಯವರು ನನ್ನ ವಿರುದ್ಧ ಮಾಡಿದ ಆರೋಪ ಕೇಳಿದಾಗ ನನಗೆ ನಗು ಬರುತ್ತದೆ. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದೇ ಇಂದಿಗೆ ಆರು ವರ್ಷಗಳಾಗಿವೆ. ನಾನು ಈಗ ಬೇರೆ ರಾಜಕೀಯ ಪಕ್ಷದಲ್ಲಿದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರು ಬಂಧಿತರಾದರು. ಆಗ ಮಾತ್ರ ಅವರನ್ನು ಒಂದೆರಡು ಬಾರಿ ನೋಡಿದ್ದು ಅಷ್ಟೇ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿ ಮಾತನಾಡಿದ್ದರು. ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದಿದ್ದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಂಸದ ಸಸಿಕಾಂತ್ ಸೆಂಥಿಲ್ ಒತ್ತಡದ ಮೇರೆಗೆ ಎಸ್ಐಟಿ ರಚನೆ ಮಾಡಿದೆ. ಸೆಂಥಿಲ್ ಅವರು ಕಾಂಗ್ರೆಸ್ ವರಿಷ್ಠರಿಗೆ ಆಪ್ತರಾಗಿದ್ದಾರೆ. ಅವರೇ ಎಸ್ಐಟಿ ರಚನೆಗೆ ಒತ್ತಡ ಹಾಕಿದ್ದಾರೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ. ಅಲ್ಲದೆ, ಸಸಿಕಾಂತ್ ಸೆಂಥಿಲ್ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಧರ್ಮಸ್ಥಳ ವಿಚಾರದಲ್ಲಿ ಸಸಿಕಾಂತ ಸೆಂಥಿಲ್ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಕೂಡ ಸಿದ್ಧರಿರುವುದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ