ತುಮಕೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ರಾಗಿ ಮಾರಾಟ ಮಾಡಲು ಅಕ್ಟೋಬರ್ 1ರಿಂದಲೇ ನೋಂದಣಿ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 11 ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ನೋಂದಣಿ ಮಾಡಿಸಲು ಡಿಸೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ.
ಇನ್ನು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಲ್‌ಗೆ 4,886 ರೂ.ಗಳನ್ನು ನಿಗದಿಪಡಿಸಲಾಗಿದೆ. 2026ರ ಜನವರಿ 1ರಿಂದ ಮಾರ್ಚ್ 31ರವರೆಗೆ ರಾಗಿ ಖರೀದಿ ನಡೆಯಲಿದೆ.
ಚಿಕ್ಕನಾಯಕನಹಳ್ಳಿ ಹೊಸ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಎಪಿಎಂಸಿ ಗೋದಾಮು, ಹುಳಿಯಾರು, ಕುಣಿಗಲ್, ತಿಪಟೂರು, ಗುಬ್ಬಿ, ಮಧುಗಿರಿ, ಶಿರಾ, ಕೊರಟಗೆರೆ, ತುಮಕೂರು ಬಟವಾಡಿ ಎಪಿಎಂಸಿ ಗೋದಾಮುಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ವಿಚಾರವಾಗೇ, ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.