ಸಂಬಂಧಿಕರ ಚಿನ್ನವೇ ಟಾರ್ಗೆಟ್: ಕೇರ್ ಟೇಕರ್ ಚಾಂದಿನಿ ಅರೆಸ್ಟ್!

ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಪ್ರದೇಶದಲ್ಲಿ, ವೃದ್ಧೆಯ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಒಬ್ಬಳು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸುಮಾರು ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಿಹಾರ ಮೂಲದ ಚಾಂದಿನಿ ಬಂಧಿತೆಯಾಗಿದ್ದಾಳೆ.

ಕಳೆದ ಎರಡು ವರ್ಷಗಳಿಂದ ವೃದ್ಧೆಯ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ ಚಾಂದಿನಿಯನ್ನು, ವೃದ್ಧೆಯ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದ ಕಾರಣ ಏಜೆನ್ಸಿ ಮೂಲಕ ನೇಮಕ ಮಾಡಲಾಗಿತ್ತು. ಕುಟುಂಬದ ಸಂಪೂರ್ಣ ನಂಬಿಕೆಯನ್ನು ಗಳಿಸಿದ್ದ ಆಕೆ, ಅದನ್ನೇ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

ವೃದ್ಧೆಯನ್ನು ನೋಡಿಕೊಳ್ಳಲು ಅವರ ಮಕ್ಕಳು ಆಗಾಗ್ಗೆ ಸಂಬಂಧಿಕರನ್ನು ಮನೆಗೆ ಕಳುಹಿಸುತ್ತಿದ್ದರು. ಅವರು ತಮ್ಮ ಬೆಲೆಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟು ಹೋಗುತ್ತಿದ್ದರು. ಈ ಮಾಹಿತಿಯನ್ನು ಗಮನಿಸಿದ ಚಾಂದಿನಿ, ಸಂಬಂಧಿಕರು ಇಲ್ಲದ ಸಮಯದಲ್ಲಿ ಅವರ ಬ್ಯಾಗ್‌ಗಳು ಮತ್ತು ವಾರ್ಡ್‌ರೋಬ್‌ಗಳನ್ನು ಪರಿಶೀಲಿಸಿ, ಹಂತಹಂತವಾಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಳು.

ಆಭರಣಗಳು ಒಂದರ ಹಿಂದೆ ಒಂದು ಕಾಣೆಯಾಗುತ್ತಿದ್ದರೂ, ಆರಂಭದಲ್ಲಿ ಯಾರಿಗೂ ಅನುಮಾನ ಬರಲಿಲ್ಲ. ಆದರೆ ಪದೇಪದೇ ಚಿನ್ನ ಕಾಣೆಯಾದ ಮೇಲೆ, ಮನೆಯವರಿಗೆ ಕೇರ್ ಟೇಕರ್ ಮೇಲೆಯೇ ಸಂಶಯ ಮೂಡಿತು ಮತ್ತು ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ದೂರು ಸ್ವೀಕರಿಸಿದ ಬಾಣಸವಾಡಿ ಪೊಲೀಸರು ತಕ್ಷಣ ತನಿಖೆ ಆರಂಭಿಸಿ, ಚಾಂದಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ದೀರ್ಘ ವಿಚಾರಣೆಯ ನಂತರ, ಆಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ₹31 ಲಕ್ಷ ಮೌಲ್ಯದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author