ಆತನಿಗೆ ಹೆದರಿಕೆ ಅನ್ನೋದೇ ಇರಲಿಲ್ಲ. ಬೆಳೆದ ನೇಚರ್ ಕೂಡ ಹಾಗೇ..! ಬ್ಯಾಟ್ ಹಿಡಿದು ಕ್ರೀಸ್ ಗಿಳಿದ್ರೆ ಸಿಕ್ಸರ್, ಬೌಂಡರಿ ಮಾತ್ರ ಬಾರಿಸ್ಬೇಕು. ಒಂದು, ಎರಡು ರನ್ಗೆ ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಹಾಗಂತ ವಯಸ್ಸು ಹೆಚ್ಚಾಗಿಲ್ಲ. ಜಸ್ಟ್ 21. ಹೆದರಿಕೆ ಅನ್ನೋದು ಮನಸ್ಸಲ್ಲಿ ಇತ್ತೋ ಏನೋ ಗೊತ್ತಿಲ್ಲ. ಆದ್ರೆ ಚಿಕ್ಕವಯಸ್ಸಿನಲ್ಲೇ ಸಿಕ್ಕ ಪ್ರೋತ್ಸಾಹ ಹೆದರಿಕೆಯನ್ನು ಮಾರುದ್ಧ ಓಡ್ಸಿತ್ತು. ರಿಷಬ್ ಪಂತ್ ಅಂದ್ರೆ ಬೌಲರ್ಗಳ ಎದೆ ನಡುಗಿಸುವ ಮಟ್ಟಕ್ಕೆ ಬೆಳೆದು ಬಿಟ್ಟಿತ್ತು. ಡೆಲ್ಲಿ ಡ್ಯಾಷರ್ನ ಆಟವೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿತ್ತು.
ವಿಷಯ ಇದಲ್ಲ. ಈಗ ರಿಷಬ್ ಪಂತ್ಗೆ ಫಿಯರ್ ಲೆಸ್ ಅನ್ನೋದು ಕೇರ್ ಲೆಸ್ ಅನ್ನುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಅಯ್ಯೋ ಹೇಗಿದ್ರೂ ಬ್ಯಾಟ್ ಬೀಸಲೇಬೇಕು.. ಎಲ್ಲಾ ಎಸೆತಗಳಿಗೂ ಬ್ಯಾಟ್ ಬೀಸ್ ಬಿಡೋಣ ಅನ್ನೋ ಮಟ್ಟಕ್ಕೆ ಪಂತ್ ಆತ್ಮವಿಶ್ವಾಸ ಬೆಳೆದುಬಿಟ್ಟಿದೆ. ಇದೇ ಈಗ ಪ್ರಾಬ್ಲಂ ಆಗಿರೋದು. ಪಂತ್ ಸ್ಟ್ರೆಂಥ್ ಈಗ ವೀಕ್ನೆಸ್ ಆಗಿ ಬದಲಾಗಿದೆ. ಬೌಲರ್ಗಳು ಅದನ್ನೇ ಉಪಯೋಗಿಸಿಕೊಂಡು ಪಂತ್ ಆಟಕ್ಕೆ ಸೆಡ್ಡು ಹೊಡೆದಿದ್ದಾರೆ. ಬಿದ್ದವನ ಮೇಲೆ ಒಂದೇಟು ಹೆಚ್ಚು ಅನ್ನುವ ಹಾಗೇ, ಪಂತ್ ವೈಫಲ್ಯವನ್ನೇ ಕಾಯ್ತಿದ್ದವರು ಈಗ ಸಿಕ್ಕಿದ್ದೇ ಚಾನ್ಸ್ ಅನ್ನುವ ಹಾಗೇ ಬೇಕಾಬಿಟ್ಟಿ ಮಾತಾಡ್ತಿದ್ದರೆ.
ಅಷ್ಟಕ್ಕೂ ಪಂತ್ ತಪ್ಪೇ ಮಾಡಿಲ್ಲ ಅನ್ನುವ ಹಾಗಿಲ್ಲ. ವಿಶ್ವಕಪ್ ಸಮಯದಲ್ಲಿ ಪಂತ್ ತೋರಿದ ಆತುರತೆ ದುಬಾರಿ ಆಗಿತ್ತು. ಅನುಭವ ಸಿಕ್ಕಮೇಲೆ ಚೇತರಿಸಿಕೊಳ್ತಾರೆ ಅಂತ ತಿಪ್ಪೆ ಸಾರಿಸಿ ಬಿಡಲಾಯಿತು. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಪಂತ್ ಬದಲಾಗಲು ಅವಕಾಶ ಸಿಕ್ಕಿತ್ತು. ಆದ್ರೆ ಫಿಯರ್ ಲೆಸ್ ಆಟ ಆಡ್ಬೇಕು ಅನ್ನೋ ಆತುರದಲ್ಲಿ ಕೇರ್ ಲೆಸ್ ಆಟ ಆಡಿದ್ದರು. ಈಗ ಪಂತ್ ಬದಲು ಅನುಭವಿ ವೃದ್ಧಿಮಾನ್ ಸಹಾಗೆ ಅವಕಾಶ ನೀಡ್ಬೇಕು ಅನ್ನುವವರ ಸಂಖ್ಯೆ ಹೆಚ್ಚಿದೆ. ಇನ್ನು ಕೆಲವರು ಜಾರ್ಖಂಡ್ನ ಜೂನಿಯರ್ ಧೋನಿ ಖ್ಯಾತಿಯ ಇಶನ್ ಕಿಶನ್ ಕಡೆ ಬೊಟ್ಟು ಮಾಡಲು ಆರಂಭಿಸಿದ್ದಾರೆ.
ರಿಷಬ್ ಪಂತ್ ಹಿಂದೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದ್ದಾರೆ ಅನ್ನೋದು ಸತ್ಯ. ಕೋಚ್ ರವಿಶಾಸ್ತ್ರಿಯೂ ಪಂತ್ ಪಾಲಿಗೆ ದೊಡ್ಡ ಅಸ್ತ್ರ. ಆದ್ರೆ ಭಾರತೀಯ ಕ್ರಿಕೆಟ್ ಬೆಳೆದಿರುವ ಮಟ್ಟವೇ ಬೇರೆ. ಧೋನಿ ಎಂಟ್ರಿಯಿಂದ ಕೀಪಿಂಗ್ ಜೊತೆ ಬ್ಯಾಟಿಂಗ್ ಮಾಡುವ ಕೀಪರ್ ಬೇಕೇ ಬೇಕು ಅನ್ನುವ ಹಾಗಾಗಿದೆ. 38 ತಂಡಗಳು ಹೋರಾಡುವ ರಣಜಿ ಕ್ರಿಕೆಟ್ ನಲ್ಲಿ ಕನಿಷ್ಟ 10 ವಿಕೆಟ್ ಕೀಪರ್ ಬ್ಯಾಟ್ಸ್ ಮನ್ಗಳು ಪ್ರತಿದಿನ ಕಣ್ಣಮುಂದೆ ಬರ್ತಾರೆ. ಇವರ ಜೊತೆ ಅನುಭವಿ ವೃದ್ಧಿಮಾನ್ ಸಾಹಾ, ಅವಕಾಶಕ್ಕಾಗಿ ಕಾಯ್ತಿರೋ ಇಶನ್ ಕಿಶಾನ್, ರಣಜಿ ಹೀರೋ ಕೆ.ಎಸ್. ಭರತ್ ಸೇರಿದಂತೆ ಸಾಲು ಸಾಲು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಪಂತ್ ಗೆ ಸವಾಲಾಗ್ತಿದ್ದಾರೆ. ಒಂದು ಸತ್ಯ. ಪಂತ್ ಬಳಿ ಸಿಕ್ಸರ್, ಬೌಂಡರಿ ಹೊಡೆಯುವ ಸಾಮರ್ಥ್ಯ ಇದೆ. ಆದ್ರೆ ಪ್ರತಿಯೊಂದು ಬಾಲ್ ಅನ್ನು ಕೂಡ ಸಿಕ್ಸರ್, ಬೌಂಡರಿ ಆಗಿಸೋಕೆ ಆಗಲ್ಲ ಅನ್ನೋದು ಗೊತ್ತಿರಬೇಕು.


