ಸಿಡ್ನಿ:ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಆಟಗಾರ ಆ್ಯಂಡ್ರೀವ್ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
46 ವರ್ಷದ ಈ ಮಾಜಿ ಆಲ್ರೌಂಡರ್ ಇಲ್ಲಿನ ಕ್ವೀನ್ಸ್ ಲ್ಯಾಂಡ್ ನ ಟೌನ್ಸ್ ವಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮೂಲಗಳ ಪ್ರಕಾರ ರಾತ್ರಿ 11 ಗಂಟೆಗೆ ಇಲ್ಲಿನ ಅಲೈಸ್ ರಿವರ್ ಬ್ರಿಡ್ಜ್ ನಲ್ಲಿ ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತವಾದ ತಕ್ಷಣ ತುರ್ತಾಗಿ ರಕ್ಷಣಾ ಕಾರ್ಯ ಕೈಗೊಂಡಾಗ ಸೈಮಂಡ್ಸ್ ಗಾಯದಿಂದ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಫಾರೆನ್ಸಿಕ್ ಕ್ರಾಶ್ ತಂಡ ಪ್ರಕರಣವನ್ನು ತನಿಖೆ ನಡೆಸುತ್ತಿದೆ.
ಬಿಳಿ ಚೆಂಡಿನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸೈಮಂಡ್ಸ್ ಸೀಮಿತ ಓವರ್ಗಳಿಗೆ ಹೇಳಿ ಮಾಡಿಸಿದ ಆಲ್ರೌಂಡರ್ ಆಗಿದ್ದರು. ಟೆಸ್ಟ್ ನಲ್ಲಿ ಸೈಮಂಡ್ಸ್ 26 ಟೆಸ್ಟ್ ಪಂದ್ಯಗಳಿಂದ 40.61 ಸರಾಸರಿ ಹೊಂದಿದ್ದರು.
198 ಏಕದಿನ ಪಂದ್ಯಗಳಿಂದ ಆರು ಶತಕ 30 ಅರ್ಧ ಶತಕ, ಆಫ್ ಸ್ಪಿನ್ ಮಧ್ಯಮ ವೇಗಿ ಆಗಿಯೂ 133 ವಿಕೆಟ್ ಪಡೆದಿದ್ದರು.
ಆಸ್ಟ್ರೇಲಿಯಾ ಪರ 14 ಟಿ20 ಪಂದ್ಯಗಳನ್ನಾಡಿ 337 ರನ್ ಗಳಿಸಿದ್ದರು. 2003ರ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ 143 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆಸ್ಟ್ರೇಲಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸೈಮಂಡ್ಸ್ ಗೆ ಸಂತಾಪ ಸೂಚಿಸಿದ್ದಾರೆ.