Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಾತ್ರವಲ್ಲದೇ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಕೂಡ ರಸ್ತೆಗಳ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಹೆಚ್ಚಾಗಿದೆ. ಶಾಸಕ ಎನ್.ಎಚ್.ಕೋನರೆಡ್ಡಿಯವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನರ ಸಂಕಷ್ಟದ ಬದುಕು.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಗುರುಪಾದೇಶ್ವರ ಪ್ಲಾಟ್ ಸುಮಾರು 30 ವರ್ಷಗಳಿಂದ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಿಸುತ್ತಲೇ ಇದೆ. ಮಳೆ ಬಂದರೇ ಕೆಸರಿನ ಗದ್ದೆಯಂತಾಗುವ ರಸ್ತೆಯಿಂದ ಜನರು ಕಂಗಾಲಾಗಿದ್ದಾರೆ. ಮಕ್ಕಳು, ವೃದ್ಧರು, ಮಹಿಳೆಯರು ಮನೆಯಿಂದ ಹೊರಗಡೆ ಬರುವುದೇ ಬಹುದೊಡ್ಡ ಸವಾಲಾಗಿದೆ.
ಹೌದು..ಕುಡಿಯುವ ನೀರಿಗಾಗಿ ಮಹಿಳೆಯರು ಈ ಕೆಸರಿನಲ್ಲಿಯೇ ನಡೆದುಕೊಂಡು ಹೋಗಿ ನೀರು ತರಬೇಕಿದೆ. ಅಲ್ಲದೆ ಸ್ವಲ್ಪ ಕಾಲು ಜಾರಿದರೂ ಬೆನ್ನು ಮೂಳೆ ಮುರಿಯುವುದಂತೂ ಖಂಡಿತ. ಹೀಗಿದ್ದರೂ ಈ ಪ್ಲಾಟ್ ಗೆ ಮಾತ್ರ ಮೂಲಭೂತ ಸೌಕರ್ಯಗಳೇ ದೊರೆತಿಲ್ಲ. ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿಯವರಿಗೆ ಈ ಭಾಗದ ಸಮಸ್ಯೆಗಳ ಮಾತ್ರ ಕಣ್ಣಿಗೆ ಬಿದ್ದಲ್ಲವೋ..? ಕಣ್ಣಿಗೆ ಬಿದ್ದಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ.
ಇನ್ನೂ ಒಂದೆರಡು ವರ್ಷವಲ್ಲ ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿನ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಬೈಕ್ ಸವಾರರು, ಪಾದಚಾರಿಗಳಿಗೆ ಇಂತಹ ರಸ್ತೆಗಳು ನರಕ ಸದೃಶ ತೋರುವಂತಿದೆ. ಮತಯಾಚನೆಗೆ ಬಂದಾಗೊಮ್ಮೆ ಜನಪ್ರತಿನಿಧಿಗಳು ನೀಡುವ ಹುಸಿ ಭರವಸೆ ಮಾತು ಕೇಳಿ ಜನರು ವೋಟ್ ಹಾಕಿ ದಿನವೂ ಸಂಕಷ್ಟದ ಬದುಕನ್ನು ದೂಡುತ್ತಿದ್ದಾರೆ.
ಒಟ್ಟಿನಲ್ಲಿ ಶಿರಗುಪ್ಪಿ ಗ್ರಾಮದ ಗುರುಪಾದೇಶ್ವರ ಕಾಲೋನಿಯ ಸಮಸ್ಯೆ ಹೇಳ ತೀರದಾಗಿದೆ. ಶಾಸಕರ ಹಾಗೂ ಸ್ಥಳೀಯ ಆಡಳಿತ ಮಂಡಳಿಯ ನಿಷ್ಕಾಳಜಿಯಿಂದ ಜನರು ಸಮಸ್ಯೆ ಅನುಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




