ಕಲಬುರಗಿಯಲ್ಲಿ, ಹಾಡಹಗಲೇ ಜನಜಂಗುಳಿಯ ನಡುವೆ, ಚಿನ್ನದ ಅಂಗಡಿಗೆ ನುಗ್ಗಿ ಖದೀಮರು ಮಾಲೀಕನ ತಲೆಗೆ ಗನ್ ಇಟ್ಟು, ಲಕ್ಷಾಂತರ ಮೌಲ್ಯದ ಚಿನ್ನ ಲೂಟಿ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ನಡೆದಿದೆ. ಮಧ್ಯಾಹ್ನ 12.30ರಿಂದ 1 ಗಂಟೆಯ ನಡುವೆ – ನಾಲ್ಕು ಮಂದಿ ಖದೀಮರು ಮಾಲೀಕ್ ಜುವೆಲ್ಲರ್ಸ್ ಅಂಗಡಿಗೆ ನುಗ್ಗಿದ್ದಾರೆ. ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಹಾಕಿ ದರೋಡೆಕೋರರು ನೇರವಾಗಿ ಅಂಗಡಿಗೆ ಪ್ರವೇಶಿಸಿದ್ದು, ಮಾಲೀಕನ ತಲೆಗೆ ಗನ್ ಇಟ್ಟು ಬೆದರಿಕೆಯ ಮೂಲಕ ಚಿನ್ನಾಭರಣ ದೋಚಿದ್ದಾರೆ.
ಈ ಕೃತ್ಯ ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ಪ್ರಸ್ತುತ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ದರೋಡೆಕೋರರು ಸುಮಾರು 2-3 ಕೆಜಿ ಚಿನ್ನಾಭರಣವನ್ನು ಎತ್ತಿ ಕೊಂಡು ಹೋಗಿದ್ದಾರೆ. ಈ ಅಂಗಡಿಯವರು ಸಾಮಾನ್ಯವಾಗಿ ದಿನಕ್ಕೆ 15-20 ಗ್ರಾಂ ಚಿನ್ನ ಮಾರಾಟ ಮಾಡುತ್ತಿದ್ದರು. ಆದರೆ ಇಂದು ಖದೀಮರು ಕೋಟ್ಯಂತರ ಮೌಲ್ಯದ ಚಿನ್ನ ದೋಚಿದ್ದಾರೆ.
ದರೋಡೆಯಾದ ಬಳಿಕ ಅಂಗಡಿ ಮಾಲೀಕ ಕಿರುಚಿಕೊಂಡರು. ಅಂಗಡಿಯಿಂದ ಕೂಗು ಕೇಳಿ ಓಡಿಹೋದೆ. ಮಾಲೀಕನ ಕೈಕಾಲು ಕಟ್ಟಿ ಹಾಕಲಾಗಿತ್ತು. ನಾನು ಬಂದು ನೋಡುವಷ್ಟರಲ್ಲಿ ಅವರು ಪರಾರಿಯಾಗಿದ್ದರು. ಹಗಲು ದರೋಡೆ ನಮಗೆ ಭಯ ಹುಟ್ಟಿಸಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿ ರಾಜಶೇಖರ್ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ