ಹಿಂದೂ ಧರ್ಮದ ಪ್ರಕಾರ, ಆಯಾ ಕೆಲಸಗಳನ್ನು ಆಯಾ ಸ್ಥಳದಲ್ಲಿಯೇ, ಆಯಾ ಸಮಯದಲ್ಲಿಯೇ ಮಾಡಬೇಕೆಂಬ ನಿಯಮವಿದೆ. ಆ ನಿಯಮವನ್ನು ಮೀರಿ ನೀವು ಆ ಕೆಲಸವನ್ನು ಮಾಡಿದರೆ, ಅದರ ಫಲ ಸಿಗುವುದಿಲ್ಲ ಅಂತಾ ಹೇಳಲಾಗತ್ತೆ. ಅವುಗಳಲ್ಲಿ ಒಂದು ಊಟ ಮಾಡುವುದು. ಊಟ ಮಾಡುವುದಕ್ಕೂ ಹಿಂದೂಗಳಲ್ಲಿ ಪದ್ಧತಿ ಇದೆ. ಅದ್ಯಾವ ಪದ್ಧತಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದ ಪ್ರಕಾರ ಊಟ ಮಾಡುವಾಗ, ನೆಲದ ಮೇಲೆ ಚಟ್ಟೆ, ಮುಟ್ಟೆಯಾಗಿ ಕುಳಿತು, ಬಟ್ಟಲಲ್ಲಿ ಊಟ ಬಡಿಸಿಕೊಂಡು, ಒಂದೇ ಕೈಯಿಂದ ಊಟ ಮಾಡಬೇಕು. ಎರಡು ಕೈ ಬಳಸಬಾರದು. ಮತ್ತು ಒಂದು ಬಟ್ಟಲನ್ನ ಒಬ್ಬರೇ ಬಳಸಬೇಕು. ಒಂದು ಬಟ್ಟಲಿನಲ್ಲಿ ಇಬ್ಬರೂ ಊಟ ಮಾಡುವಂತಿಲ್ಲ. ಊಟಕ್ಕೆ ಕುಳಿತಾಗ, ಪದೇ ಪದೇ ಏಳುವಂತಿಲ್ಲ. ಇದು ಅನ್ನಪೂರ್ಣೆಗೆ ಮಾಡುವ ಅವಮಾನ ಅಂತಾ ಹೇಳಲಾಗತ್ತೆ.
ಆಧುನಿಕ ಜೀವನ ಶೈಲಿಯ ಪ್ರಕಾರ ಕೆಲವರು ಡೈನಿಂಗ್ ಟೇಬಲ್ ಬಳಸುತ್ತಾರೆ. ವಯಸ್ಸಾದವರು, ನೆಲಕ್ಕೆ ಕೂರಲಾಗದಿದ್ದವರು, ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಳ್ಳುತ್ತಾರೆ. ಆದ್ರೆ ಯುವಕರು, ಮಕ್ಕಳೆಲ್ಲ, ನೆಲದ ಮೇಲೆ ಕುಳಿತೇ ಉಣಬೇಕು. ಇದು ಹಿಂದೂಗಳ ಪದ್ಧತಿಯ ಜೊತೆಗೆ, ಆರೋಗ್ಯಕ್ಕೂ ಉತ್ತಮ. ಆದ್ರೆ ಕೆಲವರು ಬೆಡ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದು ತಪ್ಪು. ಬೆಡ್ ಮೇಲೆ ನಾವು ನಿದ್ದೆ ಮಾಡುತ್ತೇವೆ. ಹಾಗಾಗಿ ಅದರಲ್ಲಿ ನಮ್ಮ ಮೈಯಲ್ಲಿರುವ ಕೊಳೆಯೂ ಅಂಟಿರುತ್ತದೆ. ಹೀಗಾಗಿ ಬೆಡ್ ಮೇಲೆ ಕುಳಿತು ಉಂಡರೆ, ಅನಾರೋಗ್ಯಕ್ಕೀಡಾಗಬೇಕಾಗುತ್ತದೆ.
ಇನ್ನು ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದು ಒಳ್ಳೆಯದು ಅಂತಾ ಹೇಳಲಾಗತ್ತೆ. ಪ್ರತಿದಿನ ಊಟ ಮಾಡುವಾಗ, ಕೈ ಕಾಲು ತೊಳೆದು ಊಟ ಮಾಡಬೇಕು ಅಂತಾ ಹಿರಿಯರು ಹೇಳುತ್ತಾರೆ. ಯಾಕಂದ್ರೆ ಜಲ ಅನ್ನೋದು ಪಂಚ ತತ್ವಗಳಲ್ಲಿ ಒಂದಾಗಿದೆ. ಭೂಮಿ ಕೂಡ ಪಂಚ ತತ್ವಗಳಲ್ಲಿ ಒಂದು. ನಾವು ಕೈ ತೊಳೆದರೆ ನಮ್ಮ ಕೈ ಸ್ವಚ್ಛವಾಗುತ್ತದೆ. ಮತ್ತು ಊಟ ಮಾಡುವಾಗ ಕೀಟಾಣುಗಳು ಬಾಯಿಗೆ ಹೋಗುವುದಿಲ್ಲ. ಇನ್ನು ನಮ್ಮ ಕಾಲು ತೊಳೆದು, ನೆಲದ ಮೇಲೆ ಕುಳಿತು ಉಣ್ಣುವುದರಿಂದ, ಜಲ ಮತ್ತು ಪೃಥ್ವಿ ತತ್ವಗಳು ಒಂದಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಅಂತಾರೆ ಹಿರಿಯರು.