Saturday, July 20, 2024

Latest Posts

ಶೀಘ್ರವೇ ಜಕ್ಕೂರಿನಲ್ಲಿ ಸರ್ಕಾರಿ ವೈಮಾನಿಕ ಶಾಲೆ..!

- Advertisement -

www.karnatakatv.net : ಬೆಂಗಳೂರು: ಜಕ್ಕೂರು ಏರೋಡ್ರಮ್‍ನಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ರನ್‍ವೇ ಕಾಮಗಾರಿ ನಡೆಸಲಾಗುತ್ತಿದ್ದು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಇಂದು ವೀಕ್ಷಣೆ ಮಾಡಿದರು. ಏರ್ ಕ್ರಾಫ್ಟ್, ಹೊಸದಾಗಿ ನಿರ್ಮಿಸಿರುವ ಹ್ಯಾಂಗರ್ ಗಳನ್ನು ಪರಿಶೀಲಿಸಿದರು.

ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಒಂದು ವಾರದೊಳಗೆ ರನ್‍ವೇ ಕೆಲಸ ಮುಗಿಯಲಿದೆ. ನಂತರ ಅತಿಶೀಘ್ರದಲ್ಲಿ ಸರ್ಕಾರಿ ವೈಮಾನಿಕ ಶಾಲೆ ಆರಂಭಿಸುತ್ತೇವೆ. ಉದ್ಘಾಟನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸುತ್ತೇವೆ ಎಂದು ಹೇಳಿದರು. ಈಗಾಗಲೇ 34 ವಿದ್ಯಾರ್ಥಿಗಳು ವೈಮಾನಿಕ ಚಾಲನಾ ತರಬೇತಿ ಪಡೆಯಲು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದು, ಉತ್ತಮ ಉದ್ಯೋಗ ಪಡೆದುಕೊಳ್ಳಲು ಇದು ಅವಕಾಶವಾಗಬೇಕು. ಅದಕ್ಕಾಗಿ ತ್ವರಿತಗತಿಯಲ್ಲಿ ಕೆಲಸ ಮುಗಿಸಿ ಶಾಲೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆದಿತ್ತು. ಆದ್ದರಿಂದಲೇ ನಾಲ್ಕು ವರ್ಷವಾದರೂ ಪುನಾರಂಭಿಸುವ ಪ್ರಯತ್ನಗಳನ್ನು ಮಾಡಿರಲಿಲ್ಲ. ಬೋಧಕ ಸಿಬ್ಬಂದಿ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡುವ ಕೆಲಸ ಮಾಡಿಲ್ಲ. ರನ್‍ವೇ ಗೆ ಅಗತ್ಯವಿರುವ ಜಾಗವನ್ನು ವಶಪಡಿಸಿಕೊಳ್ಳುವ ಕೆಲಸ ಕೂಡ ಮಾಡಿಲ್ಲ. ಡಿಜಿಸಿಎ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ನನಗೆ ಇಲಾಖೆ ಜವಾಬ್ದಾರಿ ನೀಡಿದ ಮೇಲೆ ಇದನ್ನೆಲ್ಲ ಗಮನಿಸಿ ಹಂತಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಗೆ ಜಕ್ಕೂರು ಏರೊಡ್ರಮ್‍ಗೆ ಸೇರಿದ ಜಾಗವನ್ನು ನೀಡಲಾಗಿತ್ತು. ಪರಿಹಾರದ ಮೊತ್ತ ರೂ. 10 ಕೋಟಿ ಮಾತ್ರ ನೀಡಿದ್ದಾರೆ. ರೂ. 13 ಕೋಟಿ ಯಷ್ಟು ಬಡ್ಡಿ ಹಣವೇ ಬರಬೇಕಿದೆ. ಅದನ್ನೂ ವಸೂಲಿ ಮಾಡುವುದಕ್ಕೆ ಅಗತ್ಯ ಕ್ರಮ ವಹಿಸಿದ್ದೇವೆ. ಈಗ ರನ್‍ವೇ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಇನ್ನೂ 3 ಎಕರೆ ಪ್ರದೇಶ ರನ್‍ವೇ ಗಾಗಿ ಅಗತ್ಯವಿದೆ. ಅದನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಡಿಜಿಸಿಎ ನಿಯಮ ಮೀರಿ ಏರೋಡ್ರಮ್‍ನ 5 ಕಿ.ಮಿ. ವ್ಯಾಪ್ತಿಯಲ್ಲಿ 45 ಮೀಟರ್ ಗಿಂತ ಹೆಚ್ಚು ಎತ್ತರ ನಿರ್ಮಿಸಿದ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ. ಬಿಬಿಎಂಪಿ ಜೊತೆಯಲ್ಲಿ ಜಂಟಿ ಸರ್ವೆ ನಡೆಯುತ್ತಿದೆ. ಶೀಘ್ರದಲ್ಲೇ ಸರ್ವೆ ಮುಗಿಸಿ, ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಖಾಸಗಿ ಏರ್ ಕ್ರಾಫ್ಟ್ ಕಂಪೆನಿಗಳಿಂದ ಬರಬೇಕಾಗಿದ್ದ ಬಾಡಿಗೆ ಸ್ವಲ್ಪ ಪ್ರಮಾಣದಲ್ಲಿ ವಸೂಲಾಗುತ್ತಿದೆ. ಸಂಪೂರ್ಣ ವಸೂಲಿ ಮಾಡಿದ ಬಳಿಕ ಅವರಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುತ್ತೇವೆ. ಖಾಸಗಿ ಕಂಪೆನಿಗಳಿಂದ ಒತ್ತುವರಿಯಾದ ಜಾಗವನ್ನೂ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಯಾರೋ ಮಾಡಿದ ಹುನ್ನಾರದಿಂದ ಅತ್ಯಂತ ಪ್ರಮುಖವಾಗಿರುವ ಏರೋಡ್ರಮ್‍ ಅನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿತ್ತು. ಕೋಟ್ಯಾಂತರ ರೂಪಾಯಿ ಆದಾಯ ತರುವಂತಹ ನೂರಾರು ಎಕರೆ ಭೂಮಿ, ಬೆಲೆ ಕಟ್ಟಲಾಗದ ವೈಮಾನಿಕ ತರಬೇತಿ ಶಾಲೆ, ಹೀಗೆ ಎಲ್ಲವನ್ನೂ ಪಾಳು ಕೊಂಪೆಗೆ ತಳ್ಳುವಂತಹ ಕೆಲಸ ಸದ್ದಿಲ್ಲದೆ ನಡೆದಿತ್ತು. ಈಗ ಅದನ್ನೆಲ್ಲ ಸರಿಪಡಿಸಲಾಗುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ಮಾಡುವ ಯೋಜನೆ ಇದೆ. ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಪ್ರಗತಿಯಲ್ಲಿದೆ. ಜಕ್ಕೂರು ಏರೋಡ್ರಮ್‍ ಬೆಂಗಳೂರಿನ ಆಕರ್ಷಣೀಯ ಕೇಂದ್ರವಾಗಬೇಕು. ನೂರಾರು ಯುವಕರು ಪೈಲಟ್‍ ಆಗಬೇಕು. ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಾವಿರಾರು ಜನರಿಗೆ ಉದ್ಯೋಗ ಸಿಗುವಂತಾಗಬೇಕು ಎನ್ನುವುದು ನನ್ನ ಆಶಯ. ಅದಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ದತೆ ಮಾಡಲಾಗುತ್ತಿದೆ ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ವೆಂಕಟೇಶ್, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss