ಗೋಕರ್ಣ ಗುಹೆಯಲ್ಲಿ 7 ವರ್ಷದಿಂದ ಗುಟ್ಟಾಗಿ ಪಾಂಡುರಂಗ ಮೂರ್ತಿಯನ್ನು ಆರಾಧಿಸುತ್ತಿದ್ದ ರಷ್ಯಾ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಇವರನ್ನ ಆಧುನಿಕ ಸಕ್ಕೂಬಾಯಿ ಎಂದು ಕರೆಯಲಾಗಿದೆ. ರಷ್ಯಾ ಮೂಲದ ಈಕೆ ತನ್ನ ಇಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾರೆ. ಕಳೆದ 7 ವರ್ಷದಿಂದ ಗೋಕರ್ಣದ ಗುಹೆಯೊಂದರಲ್ಲಿ ದೇವರ ಆರಾಧನೆ, ಧ್ಯಾನದಲ್ಲಿ ತೊಡಗಿಸಿಕೊಂಡು ಜೀವಿಸುತ್ತಿದ್ದ ಕಥೆ ಈಗ ಬಹಿರಂಗವಾಗಿದೆ.
ಪಾಸ್‌ಪೋರ್ಟ್ ಇಲ್ಲದೇ, ವೀಸಾ ಇಲ್ಲದೇ, ಮಕ್ಕಳೊಂದಿಗೆ ಅರಣ್ಯದಲ್ಲಿ ವಾಸವಿದ್ದ ಈಕೆ ಯಾರು? ಇಲ್ಲಿಗೆ ಯಾಕೆ ಬಂದ್ಲು? ಪಾಂಡುರಂಗನ ಆರಾಧನೆ ಮಾಡುತ್ತಾ ಗುಹೆಯಲ್ಲಿ ಇರೋದು ಯಾಕೆ? ಅನ್ನೋ ರೋಚಕ ಸ್ಟೋರಿಯನ್ನ ನಾವು ಹೇಳ್ತಿವಿ ಕೇಳಿ.
ಗೋಕರ್ಣವನ್ನ ದಕ್ಷಿಣ ಕಾಶಿಯಂದೇ ಕರೆಯಲಾಗುತ್ತೆ. ಇದು ಶಿವ ಭಕ್ತರಿಗೆ ಪವಿತ್ರ ಕ್ಷೇತ್ರವಾಗಿದೆ. ಮಹಾಬಲೇಶ್ವರ ದೇವಾಲಯ, ರಾಮತೀರ್ಥ, ಗಂಗಾವಲಿ ನದಿ, ಹಾಗೂ ಕಡಲತೀರ ಇದೆ. ಗೋಕರ್ಣಕ್ಕೆ ಪ್ರತಿವರ್ಷ ಸಾವಿರಾರು ವಿದೇಶಿಗರು ಆಗಮಿಸುತ್ತಾರೆ. ಅವರಲ್ಲಿ ಒಬ್ಬಳಾಗಿ ರಷ್ಯಾ ಮೂಲದ ನಿನಾ ಕುಟಿನಾ ಎಂಬ ಮಹಿಳೆ ಬಂದಿದ್ದರು. ತನ್ನ ಇಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥದ ಬಳಿ ಇರುವ ದಟ್ಟ ಅಡವಿಯ ಗುಹೆಯೊಂದರಲ್ಲಿ ವಾಸಿಸುತ್ತಿದ್ದಳು.
ಪೊಲೀಸರು ನಿಯಮಿತ ಗಸ್ತು ಸಮಯದಲ್ಲಿ ಈ ಮಹಿಳೆಯ ಉಪಸ್ಥಿತಿಯನ್ನು ಗಮನಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ವಿಚಾರಿಸಿದಾಗ ಆಕೆಯ ಬಳಿ ಪಾಸ್‌ಪೋರ್ಟ್, ವೀಸಾ ಯಾವುದೂ ಇರಲಿಲ್ಲ. ವಿಚಾರಣೆಯಲ್ಲಿ ನಿನಾ ತಿಳಿಸಿದ ಪ್ರಕಾರ, ದೇವರ ಪೂಜೆ, ಧ್ಯಾನ ಮತ್ತು ಆಧ್ಯಾತ್ಮಿಕ ಶಾಂತಿಗಾಗಿ ಭಾರತೀಯ ನೆಲ ಸೇರುವ ಕನಸು ಇತ್ತು. ಪಂಡುರಂಗನ ಭಕ್ತೆಯಾಗಿದ್ದ ನಿನಾ, ಗುಹೆಯಲ್ಲಿ ದೇವರ ಆರಾಧನೆ ಮಾಡುತ್ತಿದ್ದಳು.
ಮಹಿಳೆ ಪಾಸ್‌ಪೋರ್ಟ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಅರಣ್ಯದಲ್ಲಿ ಕಳೆದು ಹೋಗಿದ್ದಾಗಿ ಹೇಳಿದ್ದಳು. ಗೋಕರ್ಣದ ಸಿಪಿಐ ಶ್ರೀಧರ್ ಎಸ್.ಆರ್ ನೇತೃತ್ವದಲ್ಲಿ ಪೊಲೀಸರು 1 ದಿನದ ಕಾಲ ದಟ್ಟ ಅರಣ್ಯದಲ್ಲಿ ಕುಂಬಿಂಗ್ ನಡೆಸಿ, ಪಾಸ್ಪೋರ್ಟ್ ಹಾಗೂ ವೀಸಾ ಪತ್ತೆಹಚ್ಚಿದರು. ಆಧುನಿಕ ಸಕ್ಕೂಬಾಯಿ ಎಂದು ಕೆಲವರು ಆಕೆಯನ್ನು ಕರೆಯುತ್ತಿದ್ದಾರೆ. ದೇವರ ಸೇವೆಯಲ್ಲಿ ಶ್ರದ್ಧೆ ಇದ್ದರೂ, ನಿಯಮ ಉಲ್ಲಂಘನೆ ಮಾಡಿದ ಕಾರಣ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ.
ಸದ್ಯ, ನಿನಾ ಕುಟಿನಾ ಹಾಗೂ ಆಕೆಯ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಗೋಕರ್ಣದ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಇಡಲಾಗಿದೆ. ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ಅವರು ಈ ವಿಷಯವನ್ನು ವಿದೇಶಾಂಗ ಇಲಾಖೆಗೆ ವರದಿ ಮಾಡಿದ್ದಾರೆ. ರಷ್ಯಾ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ನಿನಾ ಹಾಗೂ ಆಕೆಯ ಮಕ್ಕಳನ್ನು ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.