ಶಬರಿಮಲೆ ಬಳಿಕ “ಗುರುವಾಯೂರಪ್ಪ”ನಿಗೂ ಕನ್ನ?

ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣದ ಭಾರೀ ಸದ್ದು ಮಾಡ್ತಿದೆ. ಇದರ ಜೊತೆಗೆ ಮತ್ತೊಂದು ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ವಂನ 2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ, ದೇವಸ್ಥಾನದ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದು ವರದಿಯಾಗಿದೆ.

ಗುರುವಾಯೂರು ದೇವಸ್ಥಾನದಲ್ಲಿ ಬಾಡಿ ಸ್ಕ್ಯಾನಿಂಗ್‌ ಪರಿಶೀಲನೆ ಕೊರತೆಯಿಂದಾಗಿ, ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಆದಾಯ ಮತ್ತು ವೆಚ್ಚದ ಅಂಕಿಅಂಶಗಳಲ್ಲಿ ಭಾರೀ ವ್ಯತ್ಯಾಸಗಳು ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಲೋಪದೋಷವಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿವೆ. ಒಟ್ಟಾರೆಯಾಗಿ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ವಸ್ತುಗಳಿಗೆ ಲೆಕ್ಕವೇ ಸಿಗುತ್ತಿಲ್ವಂತೆ.

2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ, ಬಜೆಟ್‌ನಲ್ಲಿ ಅಂದಾಜಿಸಲಾದ ಮತ್ತು ಲೆಕ್ಕಪರಿಶೋಧನೆಗೆ ಒಳಪಡಿಸಿದ ಆದಾಯ ಹಾಗೂ ವೆಚ್ಚದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳು ಕಂಡುಬಂದಿವೆ. ಹೂಡಿಕೆಗಳಿಂದ ಬರುವ ಆದಾಯ, ದೇಣಿಗೆ, ತೆರಿಗೆ, ಬಂಡವಾಳ ವೆಚ್ಚಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಈ ವ್ಯತ್ಯಾಸಗಳು ಕಂಡುಬಂದಿದೆ.

1980ರ ಗುರುವಾಯೂರು ದೇವಸ್ವಂ ನಿಯಮಗಳ ಪ್ರಕಾರ, ದೇವಸ್ಥಾನದ ಆಡಳಿತಾಧಿಕಾರಿಯು ಶ್ರೀಕೃಷ್ಣ ದೇವಸ್ಥಾನದ ಬೆಲೆಬಾಳುವ ವಸ್ತುಗಳ ರಿಜಿಸ್ಟರ್ ಅನ್ನು ನಿರ್ವಹಿಸಬೇಕು. ಅಲ್ಲದೆ, ನಿರ್ವಹಣಾ ಸಮಿತಿಯು ಪ್ರತಿ ವರ್ಷ ಈ ವಸ್ತುಗಳ ಭೌತಿಕ ತಪಾಸಣೆ ನಡೆಸಿ ದೇವಸ್ವಂ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಆದರೆ, ಈ ನಿಯಮಗಳು ಜಾರಿಗೆ ಬಂದ ನಂತರ ಇಂತಹ ಯಾವುದೇ ಪರಿಶೀಲನೆ ನಡೆದಿಲ್ಲ. 2019ರಲ್ಲಿ ಬೆಲೆಬಾಳುವ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ, ದೇವಸ್ವಂ ಅವುಗಳನ್ನು ಒದಗಿಸಿರಲಿಲ್ಲ ಎಂದೂ ಆರೋಪಿಸಲಾಗಿದೆ.

ಇನ್ನು, ದೇವಸ್ಥಾನದ ಕಾನೂನು ಮತ್ತು ನಿಯಮಗಳಿಗೆ ಅನುಗುಣವಾಗಿ, ದೇಗುಲದಲ್ಲಿ ಯಾವುದೇ ವಸ್ತು ಭಕ್ತರು ಖರೀದಿಸಿದರೂ, ಅದಕ್ಕೆ ಸರಿಯಾದ ಲೆಕ್ಕಪತ್ರ ನೀಡುವ ವ್ಯವಸ್ಥೆ ಇಲ್ಲ. ಚಿನ್ನ ಮತ್ತು ಬೆಳ್ಳಿಯ ವಸ್ತು ಹೊರತುಪಡಿಸಿ, ಭಕ್ತರಿಂದ ಸ್ವೀಕರಿಸಿದ ಇತರ ಬೆಲೆಬಾಳುವ ವಸ್ತುಗಳಿಗೆ ಯಾವುದೇ ರಸೀದಿಗಳನ್ನು ನೀಡಲಾಗುತ್ತಿರಲಿಲ್ಲ ಎನ್ನಲಾಗುತ್ತಿದೆ.
2020-21ರ ವರದಿ ಪ್ರಕಾರ, ವಿಶ್ರಾಂತಿ ಗೃಹಗಳು ಸೇರಿದಂತೆ ದೇವಸ್ವಂಗೆ ಸಂಬಂಧಿಸಿದ, ವಿವಿಧ ಸಂಸ್ಥೆಗಳ ಒಟ್ಟು ವೆಚ್ಚವು ಅವುಗಳ ಒಟ್ಟು ಆದಾಯಕ್ಕಿಂತ, ಸುಮಾರು 25 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.

ಇದೇ ಹಣಕಾಸು ವರ್ಷದಲ್ಲಿ ದೇವಸ್ಥಾನದ ವೆಚ್ಚವು ಅದರ ಆದಾಯಕ್ಕಿಂತ 3 ಪಟ್ಟು ಹೆಚ್ಚಾಗಿತ್ತು. 2016-17ರಿಂದ ಈ ರೀತಿಯ ಪರಿಸ್ಥಿತಿ ಕಂಡುಬಂದಿರಲಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ದೇವಸ್ಥಾನದ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

About The Author