ಭ್ರೂಣಲಿಂಗ ಪತ್ತೆ, ಹತ್ಯೆ ಕಾನೂನು ಬಾಹಿರ ಎಂದು ಕಾನೂನಿದ್ದರೂ, CM ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಲ್ಲಿ ಹೇಯ ಕೃತ್ಯ ಮುಂದುವರೆದಿದೆ. ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಹೊರವಲಯದ ಐಷಾರಾಮಿ ಬಂಗಲೆಯೊಂದರಲ್ಲಿ, ನಡೆಯುತ್ತಿದ್ದ ಭ್ರೂಣ ಹತ್ಯೆ ಜಾಲ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಹೆಣ್ಣು ಭ್ರೂಣ ಲಿಂಗ ಪತ್ತೆ ಹತ್ಯೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಮ್ ಒಂದರ ಕೈವಾಡದ ಇದೆ ಎಂದು ಶಂಕಿಸಲಾಗಿದೆ.
ಐಷಾರಾಮಿ ಬಂಗಲೆಯನ್ನು ಆರೋಪಿಗಳು ತಮ್ಮ ಅಕ್ರಮ ಚಟುವಟಿಕೆಗಳ ಕೇಂದ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಗರ್ಭಿಣಿ ಮಹಿಳೆಯರನ್ನು ಕರೆತಂದು, ಅವರ ಗರ್ಭದಲ್ಲಿರುವ ಭ್ರೂಣ ಯಾವುದು ಎಂದು ಪತ್ತೆ ಹಚ್ಚಲಾಗುತ್ತಿತ್ತು. ನಂತರ ಗಂಡು ಲಿಂಗ ಪತ್ತೆ ಮಾಡಿದರೆ, 25,000 ರೂಪಾಯಿ ವಸೂಲಿ ಮಾಡುತ್ತಿದ್ದರು. ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30,000 ರೂಪಾಯಿ ವಸೂಲಿ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಭ್ರೂಣ ಹತ್ಯೆ ದಂಧೆಯ ಮೂಲಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ. ಕೊಠಡಿಯಲ್ಲಿದ್ದ ಕಬ್ಬಿಣದ ಲಾಕರ್‌ನಲ್ಲಿ 3 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ. ಅಲ್ಲದೆ, ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು ಮತ್ತು ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭ್ರೂಣ ಹತ್ಯೆ ದಂಧೆಯ ಖಚಿತ ಮಾಹಿತಿ ಆಧರಿಸಿ, ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಎಚ್‌ಒ ಮೋಹನ್, ಮೈಸೂರು ಡಿಎಚ್‌ಒ ಕುಮಾರಸ್ವಾಮಿ ಮತ್ತು ಮಂಡ್ಯ ಕುಟುಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ಆರೋಪಿಗಳ ಕೃತ್ಯವನ್ನು ಬಯಲಿಗೆಳೆಯಲು ನಿರ್ಧರಿಸಲಾಗಿತ್ತು. ಮುಂಜಾನೆ ಸುಮಾರು 7 ಗಂಟೆಗೆ ಗರ್ಭಿಣಿಯೊಬ್ಬರ ಸಹಕಾರ ಪಡೆದು, ವರುಣ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ, ನರ್ಸ್ ಓರ್ವಳು ಸೇರಿದಂತೆ ಮೂವರು ಆರೋಪಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಇಬ್ಬರು ಗರ್ಭಿಣಿಯರಿದ್ದಾರೆ. ಅದರಲ್ಲಿ ಓರ್ವ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇ ಮಗು ಯಾವುದು ಎಂದು ತಿಳಿಯಲು ಬಂದಿದ್ದರು ಎನ್ನಲಾಗಿದೆ. ಆರೋಪಿಗಳು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಬಳಸುತ್ತಿದ್ದ ವೈದ್ಯಕೀಯ ಪರಿಕರ ಹಾಗೂ ಔಷಧಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ಮನೆಯ ಮುಂದೆಯೇ ಸುಟ್ಟುಹಾಕಿರುವುದು ಕಂಡುಬಂದಿದೆ. ಅರೆಬರೆ ಸುಟ್ಟ ಸ್ಥಿತಿಯಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ. ಸದ್ಯ ವರುಣ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

