ಬೆಂಗಳೂರು: ನಾಗರಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರ ಪೊಲೀಸರು ಹೊಸ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವ ನಾಗರಿಕರ ಜೊತೆ ಲೈವ್ ವಿಡಿಯೋ ಮೂಲಕ ಪೋಲಿಸರು ಕನೆಕ್ಟ್ ಆಗಲಿದ್ದಾರೆ.
ಟೆಕ್ ಸ್ಮಾರ್ಟ್ ಪೊಲೀಸ್ ವ್ಯವಸ್ಥೆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ವಿನೂತನ ಪ್ರಯೋಗಕ್ಕೆ ಬೆಂಗಳೂರು ಪೋಲಿಸರು ಮುಂದಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್ ರೂಂ 112ಕ್ಕೆ ಕರೆ ಮಾಡುವ ನಾಗರಿಕರಿಗೆ ನೇರವಾಗಿ ಹೊಯ್ಸಳ ಬರುತ್ತಿರುವ ಸಿಎಫ್‌ಎಸ್ ಸಂದೇಶ ರವಾನೆಯಾಗಲಿದೆ. ನಾಗರಿಕರು ತಮ್ಮ ಮೊಬೈಲ್ ಗೆ ಬರುವ ಲಿಂಕ್ ತೆರೆದ ಕೂಡಲೇ ಹೊಯ್ಸಳ ವಾಹನ ಹಾಗೂ ಸಿಬ್ಬಂದಿ ಲೈವ್ ಆಗಿ ಕನೆಕ್ಟ್ ಆಗಲಿದ್ದಾರೆ. ಕನೆಕ್ಟ್ ಆಗುವ ಸಿಬ್ಬಂದಿ ಜೊತೆ ಜನರು ನೇರವಾಗಿ ಮಾತನಾಡಬಹುದು, ಘಟನೆ ಬಗ್ಗೆ ವಿವರಿಸಬಹುದಾಗಿದೆ. ಇದರಿಂದ ಯಾವ ಹೊಯ್ಸಳ ಸಹಾಯಕ್ಕೆ ಬರುತ್ತಿದೆ? ಎಷ್ಟು ನಿಮಿಷಕ್ಕೆ ಘಟನಾ ಸ್ಥಳಕ್ಕೆ ಬರಲಿದೆ ಎಂಬುದು ಸಂತ್ರಸ್ತರಿಗೆ ಗೊತ್ತಾಗಲಿದೆ. ಹೊಸದಾಗಿ ಹೊಯ್ಸಳ ವಾಹನ ಲೈವ್ ಟ್ರ್ಯಾಕ್ ಮಾಡುವ ಆಯ್ಕೆಯನ್ನೂ ಕೂಡ ಇಲ್ಲಿ ಸೇರಿಸಲಾಗಿದೆ.
‘ಸೇಫ್ ಕನೆಕ್ಟ್’ ಹಾಗೂ ‘ಸೇಫ್ಟಿ ಐಲ್ಯಾಂಡ್’ ಎನ್ನುವ ಸ್ಮಾರ್ಟ್ ವ್ಯವಸ್ಥೆಯ ಮೂಲಕವೂ ಪೋಲಿಸರು ನಾಗರೀಕರ ಸುರಕ್ಷತೆಗೆ ಇನ್ನಷ್ಟು ವೇಗವಾಗಿ ಪರಿಣಾಮಕಾರಿಯಾಗಿ ಸ್ಪಂದಿಸಲಿದ್ದಾರೆ. ಕರ್ನಾಟಕ ಪೊಲೀಸ್ ಆ್ಯಪ್‌ನಲ್ಲಿ ಹೊಸದಾಗಿ ಸೇಫ್ ಕನೆಕ್ಟ್ ಆಯ್ಕೆ ಜಾರಿ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯದ ಬಟನ್ ಒತ್ತಿದ ಕೂಡಲೇ ಕಮಾಂಡ್ ಸೆಂಟರ್‌ನ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಅಪಘಾತ, ದರೋಡೆ ಸೇರಿದಂತೆ ಯಾವುದೇ ತುರ್ತು ಸಂಕಷ್ಟಕ್ಕೆ ಸಿಲುಕಿದವರು ಸೇಫ್ ಕನೆಕ್ಟ್‌ನ ಸೇವೆ ಪಡೆಯಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕೆ , ನಗರದಲ್ಲಿ 50 ಐಲ್ಯಾಂಡ್(ಆಪದ್ಬಾಂಧವ) ನಿರ್ಮಿಸಲಾಗಿದೆ. ಐಲ್ಯಾಂಡ್ ಪ್ಯಾನಿಕ್ ಬಟನ್ ಒತ್ತುವುದರ ಮೂಲಕವೂ ಸಂಕಷ್ಟಕ್ಕೆ ಸಿಲುಕಿದವರು ತ್ವರಿತಗತಿಯ ಪೊಲೀಸ್ ಸೇವೆ ಪಡೆಯಬಹುದು. ಹೀಗೆ ಬೆಂಗಳೂರು ಪೋಲಿಸರು ಮತ್ತಷ್ಟು ಟೆಕ್ ಸ್ಮಾರ್ಟ್ಆಗಿ ಕಾರ್ಯನಿರ್ವಹಿಸಲಿದ್ದಾರೆ.




