Hubli News: ಹುಬ್ಬಳ್ಳಿ: ಎಲ್ಲಿ ನೋಡಿದರಲ್ಲಿ ಜನ ಸಾಗರ, ಡಿಜೆ ಸೌಂಡ್‌ಗೆ ಮೈಮರೆತು ಡ್ಯಾನ್ಸ್ ಮಾಡ್ತಿರೋ ಯುವಪಡೆ, ಇಷ್ಟೊಂದು ಅದ್ಭುತ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.
11 ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳಿಂದ ಗಣೇಶನನ್ನು ಪೂಜಿಸಿದ ಭಕ್ತರು, ಭಾವುಕರಾಗಿ ನಿನ್ನೆ ದಿನದಂದು ಬೀಳ್ಕೊಟ್ಟರು. ಮರಾಠಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ 25 ಅಡಿ ಎತ್ತರದ ‘ಹುಬ್ಬಳ್ಳಿ ಚಾ ಮಹಾರಾಜ, ಮೇದಾರ ಓಣಿಯ ‘ಸಪ್ತ ಸಾಮ್ರಾಟ ಮಹಾರಾಜ’ ಹಾಗೂ ದಾಜಿಬಾನ್ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಸೇರಿ 500ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಯಿತು. ಪಟಾಕಿ ಸಿಡಿಸುತ್ತ, ಡಿಜೆ ಹಾಡಿಗೆ ಇಡೀ ಜನಸಾಗರವೇ ಕುಣುದು ಕುಪ್ಪಳಿಸಿದರು. ಹುಬ್ಬಳ್ಳಿ ಗಣಪತಿ ಮತ್ತು ಡಿಜೆ ನೋಡಲು ಬೇರೆ ಬೇರೆ ಜಿಲ್ಲೆಗಳಿಂದ ಜನರು ಬಂದಿದ್ದರು.
ಮರಾಠಗಲ್ಲಿ ವೃತ್ತ ಹಾಗೂ ದಾಜಿಬಾನ್ ಪೇಟೆ ರಸ್ತೆಯಲ್ಲಿ ಮೆರವಣಿಗೆ ಸಾಗುವಾಗ ಯುವಕರು ಡಿಜೆ, ಡಾಲ್ಬಿ ಅಬ್ಬರಕ್ಕೆ ಮನದಣಿಯೇ ಕುಣಿದು ಸಂಭ್ರಮಿಸಿದರು. ಜಾಂಝ್, ಪಂಚವಾದ್ಯ ಮೇಳಗಳು ಮೆರವಣಿಗೆಗೆ ಕಳೆ ಹೆಚ್ಚಿಸಿದ್ದವು. ಮಹಿಳೆಯರು ಭಜನೆ ಮಾಡುತ್ತ, ಭಕ್ತಿಗೀತೆ ಹಾಡುತ್ತ ಸಾಗಿದರು.
ರಾತ್ರಿ 10ರವರೆಗೆ ನಿಧಾನವಾಗಿ ಸಾಗಿದ ಮೆರವಣಿಗೆ, ಡಿಜೆ ಸ್ತಬ್ಧ ಆದ ಬಳಿಕ ವೇಗ ಪಡೆದುಕೊಂಡಿತು. ಭಕ್ತರು ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಈಡುಗಾಯಿ ಒಡೆದು ಭಕ್ತಿ ಅರ್ಪಿಸಿದರು.



