2020.. ಈ ವರ್ಷ ಇಡೀ ಜಗತ್ತು ಕಂಡುಕೇಳರಿಯದಂತಹ ಹಲವಾರ ಘಟನೆಗಳಿಗೆ ಸಾಕ್ಷಿಯಾಗ್ಬಿಟ್ಟಿದೆ. ಚೀನಿ ವೈರಸ್ ಕೊರೋನಾ ಆರ್ಭಟದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡ್ರು. ಕೋಟ್ಯಾನು ಕೋಟಿ ಮಂದಿಗೆ ಈ ವೈರಸ್ ತಗುಲಿತು. ಹಲವಾರು ವಲಯಗಳಿಗೆ ಸಹಿಸಿಕೊಳ್ಳಲಾದ ಪಟ್ಟು ಕೊಡ್ತು ಈ ವೈರಸ್. ಅದ್ರಲ್ಲೂ ಬಣ್ಣದ ಜಗತ್ತಿಗೆ ಕೊರೋನಾ ಕೊಟ್ಟ ಪೆಟ್ಟು ಅಂತಿದ್ದಲ್ಲ ಬಿಡಿ. ತೆರೆಮರೆಯ ಕಾರ್ಮಿಕರು ಒಪ್ಪತ್ತೂಟಕ್ಕೂ ಪಡಬಾರದ ಕಷ್ಟ ಅನುಭವಿಸಿದ್ರು. ಇದರ ನಡುವೆಯೇ ಜನಪ್ರಿಯ ಕಲಾವಿದರ ಕನ್ನಡ ಚಿತ್ರರಂಗದಿಂದ ಮರೆಯಾದರು.
ಹಠತ್ ನಿಧನರಾದ ಚಿರು
ಕನ್ನಡ ಚಿತ್ರರಂಗದಲ್ಲಿ ಯಾರು ಊಹಿಸಿಕೊಳ್ಳಲಾಗದ ಘಟನೆಯೊಂದು ನಡೆದೆ ಹೋಗ್ಬಿಟ್ಟಿತ್ತು. ಜೂನ್ 7ರಂದು ಯಾರು ನಿರೀಕ್ಷಿಸಲಾಗದ ಯುವ ಕಲಾವಿದರೊಬ್ಬರು ಕೊನೆಯುಸಿರೆಳೆದಿದ್ದರು. ಅವರೇ ಯುವಸಾಮ್ರಾಟ್ ಚಿರಂಜೀವಿ ಸರ್ಜಾ. ಚಿರು ಹಠತ್ ನಿಧನದಿಂದ ಬಣ್ಣದ ಜಗತ್ತು ಶೋಕ ಸಾಗರದಲ್ಲಿ ಮುಳುಗಿತ್ತು. ಕೈ ತುಂಬು ಸಿನಿಮಾಗಳು ಇಟ್ಕೊಂಡಿದ್ದ ಚಿರು ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದರು. ಆದ್ರೆ ಆ ವಿಧಿಯಾಟವೇ ಬೇರೆಯಾಗಿತ್ತು. ಚಿರು ಇನ್ನೆಂದು ಬಾರದ ಲೋಕಕ್ಕೆ ಹೋಗಿಬಿಟ್ರು. ಚಿರು ಅಕಾಲಿಕ ನಿಧನದಿಂದ ಪತ್ನಿ ಮೇಘನಾ ದುಃಖದ ಮಡುವಿನಲ್ಲಿ ತಳಿತ್ತು. ಹೊಟ್ಟೆಯಲ್ಲಿ ಮಗುವಿಟ್ಕೊಂಡು ಕಣ್ಣೀರ ಕಂಬನಿ ಸುರಿದ್ರು. ಆದ್ರೆ ದೇವರು ಮೇಘನಾ ಕೈ ಬಿಡಲಿಲ್ಲ. ಅಕ್ಟೋಬರ್ 23ರಂದು ಮುದ್ದಾದ ಗಂಡು ಮಗುವಿಗೆ ಮೇಘನಾ ಜನ್ಮ ನೀಡಿದ್ರು. ಚಿರು ವಾಪಸ್ ಮಗು ರೂಪದಲ್ಲಿ ಬಂದಿದೆ ಅನ್ನೋ ಖುಷಿ ಎಲ್ಲೆಡೆ ಮನೆ ಮಾಡಿದೆ.
ಸದ್ದು ನಿಲ್ಲಿಸಿ ‘ಬುಲೆಟ್’
ತಮ್ಮ ಸಹಜ ಅಭಿನಯದಿಂದಲ್ಲೇ ಸಿನಿಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ನಗುವಿನ ಮಾಂತ್ರಿಕ ಬುಲೆಟ್ ಪ್ರಕಾಶ್ ಮಾರ್ಚ್ 31ರಂದು ಅನಾರೋಗ್ಯ ಕಾರಣದಿಂದ ಕೊನೆಯುಸಿರೆಳೆದರು. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬುಲೆಟ್ ಪ್ರಕಾಶ್ ಎಲ್ಲರನ್ನ ಅಗಲಿದರು. ಸುಮಾರು 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಶೂಟಿಂಗ್ ಸೆಟ್ ನಲ್ಲಿಯೇ ಪ್ರಾಣ ಬಿಟ್ಟ ಹಾಸ್ಯನಟ
ಹಾಸ್ಯನಟ ರಾಕ್ ಲೈನ್ ಸುಧಾಕರ್ ಸೆಪ್ಟಂಬರ್ 24ರಂದು ಶೂಟಿಂಗ್ ಸೆಟ್ ನಲ್ಲಿಯೇ ಕೊನೆಯುಸಿರೆಳೆದರು. ಶುಗರ್ ಲೆಸ್ ಸಿನಿಮಾ ಶೂಟಿಂಗ್ ಗಾಗಿ ತೆರಳಿದ್ದ ಸುಧಾಕರ್ ಮೇಕಪ್ ಹಚ್ಚಿಕೊಂಡಿರುವಾಗ್ಲೇ ಹೃದಯಾಘಾತದಿಂದ ನಿಧನರಾದರು. ಟಗರು, ಪಂಚರಂಗಿ, ಚಮಕ್ ಹೀಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಕ್ ಲೈನ್ ಸುಧಾಕರ್ ನಟಿಸಿದ್ದರು.
ಕೊನೆಯುಸಿರೆಳೆದ ಹಿರಿಯ ನಟಿ ಕಿಶೋರಿ
ರಂಗಭೂಮಿ ಕಲಾವಿದೆ, ಹಿರಿಯ ನಟಿ ಕಿಶೋರಿ ಬಲ್ಲಾಳ್ ಫೆಬ್ರವರಿ 18ರಂದು ಉಸಿರಾಟದ ಸಮಸ್ಯೆಯಿಂದ ಉಡುಪಿಯಲ್ಲಿ ನಿಧನರಾದರು. 1960ರಲ್ಲಿ ತೆರೆಗೆ ಬಂದ ಇವಳೆಂಥ ಹೆಂಡತಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಅವರು, ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದರು.
ಮತ್ತೋರ್ವ ಪೋಷಕ ನಟಿ ಶಾಂತಮ್ಮ ಜುಲೈ 19ರಂದು ಕೊನೆಯುಸಿರೆಳೆದರು. ಕನ್ನಡ, ಹಿಂದಿ, ತಮಿಳು ಸೇರಿದಂತೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಾಂತಮ್ಮ ನಟಿಸಿದ್ದರು.
ಮೈಕಲ್ ಮಧು ನಿಧನ
ವಿಚಿತ್ರ ಏರ್ ಸ್ಟೈಲ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಹಾಸ್ಯನಟ ಮೈಕಲ್ ಮಧು. ಮೇ 13ರಂದು ಅನಾರೋಗ್ಯದಿಂದ ಮೈಕಲ್ ಮಧು ಅಗಲಿದರು. ಶಿವಣ್ಣ ನಟನೆಯ ಓಂ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದ ಮಧು ಸುಮಾರು 80 ಸಿನಿಮಾಗಳಲ್ಲಿ ನಟಿಸಿದ್ದರು.
ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನ
ಹಿರಿಯ ಸಂಗೀತ ನಿರ್ದೇಶಕ ರಾಜನ್ ಅಕ್ಟೋಬರ್ 11ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಸಹೋದರ ನಾಗೇಂದ್ರ ಜೊತೆ ಸೇರಿ 375ಕ್ಕೂ ಹೆಚ್ಚ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಡಾ.ರಾಜ್, ವಿಷ್ಣುವರ್ಧನ್ ಹೀಗೆ ಬಹುತೇಕ ಕಲಾವಿದರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.
ಅನಾರೋಗ್ಯದಿಂದ ಮಿಮಿಕ್ರಿ ರಾಜಗೋಪಲ್ ನಿಧನ
ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಜೂನ್ 1 ರಂದು ನಿಧನರಾದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ 69 ವರ್ಷ ವಯಸ್ಸಾಗಿತ್ತು.
ರಂಗಭೂಮಿ ಹಾಗೂ ಸಿನಿಮಾ ಕಲಾವಿದರಾಗಿದ್ದ ಹೆಚ್.ಜಿ.ಸೋಮಶೇಖರ ರಾವ್ ನವೆಂಬರ್ 3ರಂದು ನಿಧನರಾದರು. ವಯೋಸಹಜ ಖಾಯಿಲೆಯಿಂದ 86 ವರ್ಷದ ಸೋಮಣ್ಣ ಮರಣ ಹೊಂದಿದರು.
ನಟಿ ಚಂದನ ಸೂಸೈಡ್
ಕಿರುತೆರೆ ನಟಿ ಚಂದನ ಮೇ 28ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರೀತಿಸಿದಾತನಿಂದ ಮೋಸ ಹೋದ ಚಂದನ ವಿಷ ಕುಡಿದು ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ಯಾಟ್ ಹುಡ್ಗಿರ್ ಹಳ್ಳಿ ಲೈಫ್ ಖ್ಯಾತಿ ಮೆಬೀನಾ ನಿಧನ
ಪ್ಯಾಟ್ ಹುಡ್ಗಿರ್ ಹಳ್ಳಿ ಲೈಫ್ ಕಾರ್ಯಕ್ರಮ ವಿನ್ನರ್ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಮೇ 26ರಂದು ನಿಧನರಾದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಅಪಘಾತದಲ್ಲಿ ಮೆಬೀನಾಶ ಎಲ್ಲರನ್ನು ಅಗಲಿದರು.