Sandalwood News: ಅಜೇಯ್ ರಾವ್ ಈ ಬಾರಿ ಹೀರೋಯಿಸಂ ಬಿಟ್ಟು ಸರಳ ಕಥೆ ಮತ್ತು ಪಾತ್ರ ಮೂಲಕ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಹೊರಬಂದವರಿಗೆ ಮತ್ತೆ ನೋಡಬೇಕೆನಿಸುತ್ತೆ. ಅಷ್ಟರ ಮಟ್ಟಿಗೆ ಭಾವುಕತೆಯಿಂದ ಕೂಡಿರುವ ಸಿನಿಮಾ.
ಕಥೆ ತುಂಬಾನೆ ಸಿಂಪಲ್. ಆದರೆ, ಅದನ್ನು ನಿರೂಪಿಸಿರುವ ರೀತಿ ಮಾತ್ರ ಎಲ್ಲರ ಮನಸ್ಸನ್ನು ಗೆಲ್ಲುವಂತಿದೆ. ನಿರ್ದೇಶಕರ ಕಥೆಯ ಎಳೆ ಚೆನ್ನಾಗಿದೆ. ಹಾಗಂತ, ಈ ರೀತಿಯ ಕಥೆ ಎಲ್ಲೂ ಬಂದಿಲ್ಲ ಅಂತವಲ್ಲ. ಈ ಹಿಂದೆ ಹೆಣ್ಣು ಮಕ್ಕಳ ಮೇಲೆ, ಚಿಕ್ಕ ಹುಡುಗಿಯರ ಮೇಲೆ ಆದಂತಹ ದೌರ್ಜನ್ಯ ಮತ್ತು ಅತ್ಯಾಚಾರ ಕುರಿತ ವಿಷಯಗಳನ್ನಿಟ್ಟುಕೊಂಡು ಸಿನಿಮಾಗಳು ಬಂದಿವೆ. ಇದೂ ಕೂಡ ಆ ಸಾಲಿನ ಸಿನಿಮಾ ಆಗಿದ್ದರೂ, ಇಲ್ಲೊಂದಷ್ಟು ವಿಶೇಷತೆ ಇದೆ. ಅದೇ ಸಿನಿಮಾದ ಹೈಲೆಟ್. ಆ ವಿಶೇಷತೆ ಏನು ಅಂತ ತಿಳಿಯುವ ಕುತೂಹಲವಿದ್ದರೆ, ಒಂದೊಮ್ಮೆ ಮಿಸ್ ಮಾಡದೆ ಸಿನಿಮಾ ನೋಡಬೇಕು.
ಸಿನಿಮಾದ ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಎಲ್ಲೂ ಬೋರ್ ಎನಿಸುವ ವಿಷಯಗಳಿಲ್ಲ. ತಮಾಷೆಯಾಗಿ, ನಗಿಸುತ್ತಲೇ ಸಾಗುವ ಕಥೆ, ದ್ವಿತಿಯಾರ್ಧ ತಿರುವೊಂದನ್ನು ಪಡೆಯುತ್ತೆ. ಅದೇ ಸಿನಿಮಾದ ಮುಖ್ಯ ಘಟ್ಟ ಎನ್ನಬಹುದು. ಇಡೀ ಸಿನಿಮಾದಲ್ಲಿ ನೋವಿದೆ, ಸಂಕಟವಿದೆ, ಭಾವನೆಗಳಿವೆ, ಸ್ವಾಭಿಮಾನವಿದೆ, ರೋಷವಿದೆ, ಹಠವಿದೆ, ಭಾವುಕತೆಯೂ ತುಂಬಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಅನ್ನೋದು ಎದ್ದು ಕಾಣುತ್ತೆ. ಇದೊಂದೇ ಕಾರಣಕ್ಕೆ ಯುದ್ಧಕಾಂಡ ಕಾಡುವ ಮತ್ತು ನೋಡುವ ಸಿನಿಮಾ ಆಗಿ ಹೊರಬಂದಿದೆ.
ಸಿನಿಮಾ ಮನರಂಜನೆ ನಿಜ. ಆದರೆ, ಅಲ್ಲೊಂದಷ್ಟು ಸಂದೇಶವಿರದಿದ್ದರೆ ಹೇಗೆ. ಅಂಥದ್ದೊಂದು ಸಂದೇಶ ಇಲ್ಲಿದೆ. ಬರೀ ನೋಡಿ ತಿಳಿಯೋ ಸಂದೇಶವಲ್ಲವದು. ಅದನ್ನು ಪಾಲಿಸಬೇಕಾದ ಧರ್ಮವೂ ಹೌದು ಎಂಬುದನ್ನಿಲ್ಲಿ ಸಾರಿ ಸಾರಿ ಹೇಳಲಾಗಿದೆ. ಇಷ್ಟಕ್ಕೂ ಅಜೇಯ್ ರಾವ್ ಅವರು ಇಂಥದ್ದೊಂದು ಕಂಟೆಂಟ್ ಆಯ್ಕೆ ಮಾಡಿಕೊಂಡು ಎಲ್ಲಿ ಎಡವಟ್ಟು ಮಾಡಿಕೊಳ್ತಾರೋ ಅನ್ನೋ ಮಾತುಗಳು ಕೇಳಿಬಂದಿದ್ದವು. ತಮ್ಮ ಯುದ್ಧಕಾಂಡ ಮೇಲೆ ವಿಶ್ವಾಸ,ಒಲವು ತುಂಬಿದ್ದರಿಂದಲೇ ಅವರು ಸಿನಿಮಾ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ ಅಂತಾನೇ ಹೇಳಬಹುದು.
ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಒಂದನೇ ಕ್ಲಾಸ್ ಓದುವ ಮುಗ್ಧ ಹುಡುಗಿಯೊಬ್ಬಳು ಶಾಲೆಯಿಂದ ನೇರ ಮನೆಗೆ ಬಾರದೆ ಮಿಸ್ ಆಗ್ತಾಳೆ. ಮನೆಗೆ ಬಾರದ ಮಗಳನ್ನು ಹುಡುಕಿ ಹೊರಡುವ ತಾಯಿಗೆ ಆತಂಕ. ಅತ್ತ ಮಗಳು ಎಲ್ಲಿ ಹೋದಳು, ಏನಾಯಿತು ಎಂಬ ಅನುಮಾನ. ಇವೆಲ್ಲದರ ನಡುವೆ ಅಲ್ಲೊಂದು ಪೈಶಾಚಿಕ ಕೃತ್ಯ ನಡೆದು ಹೋಗಿರುತ್ತೆ. ಕೊನೆಗೆ ಆ ವಿಷಯ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿಂದ ಕೋರ್ಟ್ ಮೆಟ್ಟಿಲೂ ಏರುತ್ತೆ. ಆ ಕೋರ್ಟ್ ಒಳಗೆ ನಡೆಯುವ ಡ್ರಾಮಾ ಸಿನಿಮಾದ ಹೈಲೆಟ್. ಆ ಹುಡುಗಿಗೆ ಏನಾಯ್ತು, ಹುಡುಗಿಯ ತಾಯಿ ಏನು ಮಾಡ್ತಾಳೆ. ಅವರಿಬ್ಬರ ಪರ ಕೋರ್ಟ್ ಒಳಗೆ ವಾದಿಸುವ ಲಾಯರ್ ಆ ಕೇಸನ್ನು ಗೆಲ್ಲುತ್ತಾನಾ? ಇಲ್ಲವಾ ಅನ್ನೋದೇ ಕಥೆ.
ಇಲ್ಲಿ ಕೋರ್ಟ್ ಡ್ರಾಮಾ ಆಗಿರುವುದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಎಲ್ಲೋ ಒಂದು ಕಡೆ ನೋಡುಗರನ್ನು ಭಾವುಕತೆಗೆ ದೂಡುತ್ತೆ. ಸಿನಿಮಾ ನೋಡಿ ಹೊರಬರುವ ಜನರ ಎದೆ ಭಾರ ಎನಿಸುತ್ತೆ. ಹೆಣ್ಣು ಹೆತ್ತ ಪೋಷಕರು ಈ ಸಿನಿಮಾ ನೋಡಲೇಬೇಕೆನಿಸೋದು ಸುಳ್ಳಲ್ಲ. ಅಷ್ಟೊಂದು ಕ್ಲಾರಿಟಿಯಿಂದ, ಅಷ್ಟೊಂದು ಪ್ರಾಮಾಣಿಕತೆಯಿಂದ ಮಾಡಿರುವ ಸಿನಿಮಾ ಅಂತ ಗೊತ್ತಾಗುತ್ತೆ. ಸಿನಿಮಾದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಚಿತ್ರಕಥೆಯಲ್ಲೂ ಕಾಣಬಹುದು. ಸ್ಕ್ರೀನ್ ಪ್ಲೇನಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ. ಇಡೀ ತಂಡದ ಪ್ರಯತ್ನ ಸಾರ್ಥಕ ಎನಿಸುತ್ತೆ.
ಇನ್ನು, ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಆದ್ಯತೆ ಇದೆ. ಹಾಡು ಸದ್ದು ಮಾಡದಿದ್ದರೂ, ಇಲ್ಲಿ ಪ್ರತಿಯೊಂದು ದೃಶ್ಯದಲ್ಲಿ ಕೇಳಿಬರುವ ಹಿನ್ನೆಲೆ ಸಂಗೀತ ಹೆಚ್ಚು ಸೌಂಡು ಮಾಡುತ್ತೆ. ಅದಕ್ಕೆ ಅದರದೇ ಆದ ತೂಕವಿದೆ. ಆ ಕಾರಣಕ್ಕೂ ಸಿನಿಮಾ ಮನಸ್ಸಿಗೆ ತಟ್ಟುತ್ತೆ. ಇನ್ನು, ಸಿನಿಮಾ ವೇಗಕ್ಕೆ ಸಂಕಲನ ಕೂಡ ಹೆಗಲು ಕೊಟ್ಟಿದೆ. ಕೋರ್ಟ್ ಡ್ರಾಮಾ ಹೈಲೆಟ್ ಆಗಿರುವುದರಿಂದ ಪ್ರತಿಯೊಂದು ಪರಿಕರ ಕೂಡ ಗಮನಸೆಳೆಯುತ್ತೆ. ಕಲಾನಿರ್ದೇಶನದ ಅಂಶವೂ ಇಲ್ಲಿ ಮಾತಾಡುತ್ತೆ. ಉಳಿದಂತೆ ಸಿನಿಮಾದ ದ್ವಿತಿಯಾರ್ಧ ಸೀಟಿನಂಚಿಗೆ ಕುಳಿತು ನೋಡುವಂತಹ ಕೌತುಕ ಹೆಚ್ಚಿಸುತ್ತೆ. ಅದೇ ಸಿನಿಮಾಗಿರುವ ತಾಕತ್ತು.
ಅಜೇಯ್ ರಾವ್ ಇಲ್ಲಿ ಎಂದಿಗಿಂತಲೂ ಚೆನ್ನಾಗಿ ಕಾಣುತ್ತಾರೆ. ಲವ್ವರ್ ಬಾಯ್ ಮೂಲಕ ಇಷ್ಟವಾಗಿದ್ದ ಅವರಿಲ್ಲಿ, ಒಬ್ಬ ಸ್ವಾಭಿಮಾನಿ ವಕೀಲನಾಗಿ, ಮಾನವೀಯ ಗುಣವಿಳ್ಳ ವ್ಯಕ್ತಿಯಾಗಿ ಭಾವುಕತೆ ಹೆಚ್ಚಿಸುವಲ್ಲಿ ಕಾರಣರಾಗುತ್ತಾರೆ. ಯಾವುದೇ ಫೈಟ್ ಇಲ್ಲ. ಆದರೆ, ಕೋರ್ಟ್ ಒಳಗೆ ವಾದಿಸುವ ಮಾತಿನ ಫೈಟ್ ಇಡೀ ಸಿನಿಮಾವನ್ನು ಹಿಡಿದಿಟ್ಟುಕೊಳ್ಳುವಂತಿದೆ. ಇನ್ನು ತಾಯಿ ಪಾತ್ರದಲ್ಲಿ ಅರ್ಚನಾ ಜೋಯಿಸ್ ಮಿಂಚಿದ್ದಾರೆ. ನಟನೆ ಮೂಲಕ ಅಳಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಾತ್ರವೇ ತಾವಾಗಿ ಜೀವಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ಅಭಿನಯವಂತೂ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತೆ. ಅವರ ನಟನೆ, ಹಾವಭಾವ ಎಲ್ಲವೂ ಚಪ್ಪಾಳೆ ಗಿಟ್ಟಿಸುವಂತಿದೆ. ಉಳಿದಂತೆ ನಾಗಾಭರಣ ಅವರೂ ಇಲ್ಲಿ ಹೈಲೆಟ್. ರಾಧ್ಯಾ, ಸುಪ್ರಿತಾ ಕೂಡ ತಮ್ಮ ಮಾತ್ರಕ್ಕೆ ಮೋಸ ಮಾಡಿಲ್ಲ. ಕ್ಯಾಮೆರಾ ಕೈಚಳಕ ಯುದ್ಧಕಾಂಡದ ರೋಚಕತೆಗೆ ಸಾಕ್ಷಿಯಾಗಿದೆ.