Saturday, January 18, 2025

Latest Posts

Sandalwood News: ರಿಷಭ್ ಮೇಲೇಕೆ ಕೋಪ? ಶಿವಾಜಿ ಬಯೋಪಿಕ್ ನಿಲ್ಲುತ್ತಾ?

- Advertisement -

Sandalwood News: ಸಿನಿಮಾ ಅಂದಮೇಲೆ ವಾದ-ವಿವಾದಗಳು ಸಹಜ. ಅದರಲ್ಲೂ ನಟ-ನಟಿಯರ ಮೇಲಂತೂ ಆಗಾಗ ಕೆಲ ವಿವಾದಗಳು ಸುತ್ತಿಕೊಳ್ಳೋದು ನಿಜ. ಈಗ ಅಂಥದ್ದೇ ಸಣ್ಣ ವಾದವೊಂದು ಸ್ಯಾಂಡಲ್ ವುಡ್ ಸ್ಟಾರ್ ರಿಷಭ್ ಶೆಟ್ಟಿ ಅವರ ಮೇಲೂ ಇದೆ. ಇದನ್ನು ವಿವಾದ ಅನ್ನಬೇಕೋ, ವಾದ ಅನ್ನಬೇಕೋ ಗೊತ್ತಿಲ್ಲ. ಇಷ್ಟಕ್ಕೂ ಇದೆಲ್ಲಾ ಬೇಕೂ ಇರಲಿಲ್ಲ. ಒಂದೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ, ಅದನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಂಡರೆ, ಅದೊಂದು ಸಿನಿಮಾ ಅಷ್ಟೇ. ಅಷ್ಟಕ್ಕೂ ಅವರೊಬ್ಬ ಕಲಾವಿದರು. ಕಲಾವಿದರಿಗೆ ಭಾಷೆಯ ಗಡಿ ಇಲ್ಲ. ಕಲೆಯನ್ನು ಆರಾಧಿಸೋರು, ಪ್ರೀತಿಸೋರು, ಕಲಾವಿದನ ಆಯ್ಕೆಯನ್ನೂ ಇಷ್ಟಪಡಬೇಕಲ್ಲವೇ?

ಕಳೆದ ಎರಡು ದಿನಗಳಿಂದಲೂ ಸ್ಯಾಂಡಲ್ ವುಡ್ ನಲ್ಲಿ ಶಿವಾಜಿ ಬಯೋಪಿಕ್ ಸಿನಿಮಾ ವಿಚಾರವೇ ಸುದ್ದಿಯಾಗುತ್ತಿದೆ. ಅದರಲ್ಲೂ ರಿಷಭ್ ಶೆಟ್ಟಿ ವಿಷಯವೂ ಜೋರು ಸದ್ದು ಮಾಡ್ತಿದೆ. ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ತಯಾರಿಯಲ್ಲಿದ್ದಾರೆ. ಸದ್ಯ ಆ ಚಿತ್ರದಲ್ಲಿ ಶಿವಾಜಿ ಪಾತ್ರದಲ್ಲಿ ರಿಷಭ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಿಷಭ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಯಾವಾಗ ಅವರು ಶಿವಾಜಿ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡಿದರೋ, ಆಗಿನಿಂದಲೇ ಅವರ ಆ ಸಿನಿಮಾ ಆಯ್ಕೆ ಬಗ್ಗೆ ಕಾಮೆಂಟ್ಸ್ ಬರೋಕೆ ಶುರುವಾದವು. ಈಗ ಅದು ಇನ್ನೊಂದು ಹಂತಕ್ಕೂ ಹೋಗಿದೆ. ಹೀಗಾಗಿ ರಿಷಬ್ ಶೆಟ್ಟಿ ಚಿತ್ರದಲ್ಲಿ ಶಿವಾಜಿ ಮಹಾರಾಜರರ ಪಾತ್ರ ಮಾಡುತ್ತಿರುವುದು ತುಸು ಜೋರಾಗಿಯೇ ಚರ್ಚೆ ಹುಟ್ಟು ಹಾಕಿದೆ.

ಶಿವಾಜಿ ಬಯೋಪಿಕ್ ಮಾಡುವ ಕುರಿತು ಯಾವಾಗ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದರೋ, ಆಗ ಕಾಮೆಂಟ್ ಗಳ ಸುರಿಮಳೆ ಆಯ್ತು. ನಿಮ್ಮ ಆಯ್ಕೆ ಸರಿಯಿಲ್ಲ, ಈ ಚಿತ್ರ ಮಾಡುವುದು ಬೇಕಿರಲಿಲ್ಲ, ಶಿವಾಜಿ ಕನ್ನಡ ನಾಡಿಗೆ ಕೊಟ್ಟ ಕೊಡುಗೆ ಏನು? ಇದಕ್ಕಿಂತ ಕನ್ನಡದ ಮಹಾನ್ ನಾಯಕರ ಸಿನಿಮಾ ಮಾಡಬಹುದು, ಗೆದ್ದಮೇಲೆ ಕನ್ನಡವನ್ನು ಮರೆಯುವುದು ಸರಿಯಲ್ಲ, ಹೀಗೆ ನಾನಾ ರೀತಿಯ ಕಾಮೆಂಟ್ಸ್ ಬಂದವು. ಸಾಕಷ್ಟು ಜನ ಬೇಸರ ಹೊರಹಾಕಿ ಪೋಸ್ಟ್ ಮಾಡಿದ್ದಾರೆ. ಈಗಲೂ ಮಾಡುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಕೆಲವರು ನಿಮ್ಮ ಸಿನಿಮಾಗಳನ್ನು ಬಾಯ್ಕಾಟ್ ಮಾಡುವುದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ!

ಈಗಾಗಲೇ ಶಿವಾಜಿ ಮಹಾರಾಜರ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಧಾರಾವಾಹಿಗಳು ಆಗಿವೆ. ಇದೀಗ ಮತ್ತೆ ಬಯೋಪಿಕ್ ಮಾಡುವ ಅವಶ್ಯಕತೆ ಇರಲಿಲ್ಲ ಅನ್ನೋದು ಅನೇಕರ ವಾದ. ಮಹಾನ್ ನಾಯಕನ ಚರಿತ್ರೆಯನ್ನು ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ಕಟ್ಟಿಕೊಡಲಾಗುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ. ಇನ್ನು ರಿಷಬ್ ಶೆಟ್ಟಿ ಅವರ ಆಯ್ಕೆ ಬಗ್ಗೆ ವಿರೋಧ ವ್ಯಕ್ತವಾದಂತೆ, ಅವರ ಪರವಾಗಿಯೂ ಸಾಕಷ್ಟು ಜನ ನಿಂತಿದ್ದಾರೆ. ಶಿವಾಜಿ ಕರ್ನಾಟಕದವರು ಅಲ್ಲದೇ ಇದ್ದರೂ ಭಾರತದವರು. ಅವರ ಬಯೋಪಿಕ್ ಮಾಡಿದರೆ ಏನು ತಪ್ಪು? ರಿಷಬ್ ಶೆಟ್ಟಿಗೆ ಈ ಪಾತ್ರ ಸೂಕ್ತವಾಗಿರುತ್ತದೆ. ಶಿವಾಜಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ಶೆಟ್ಟಿ ಮತ್ತೆ ಶೈನ್ ಆಗಲಿ ಎಂದು ಬೆಂಬಲ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಸದ್ಯ ಈ ಸಿನಿಮಾ ಮತ್ತು ರಿಷಭ್ ಇಬ್ಬರೂ ಜೋರು ಸುದ್ದಿಯಾಗುತ್ತಿದ್ದಾರೆ.

‘ದಿ ಪ್ರೈಡ್ ಆಫ್ ಭಾರತ್; ಛತ್ರಪತಿ ಶಿವಾಜಿ ಮಹಾರಾಜ್’ ಹೆಸರಿನಲ್ಲಿ ಸಿನಿಮಾ ಘೋಷಣೆ ಆಗಿದೆ. ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಹೇಗೆ ಕಾಣುತ್ತಾರೆ? ಎನ್ನುವ ಸಣ್ಣ ಪೋಸ್ಟರ್ ಸಹ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಹಾಗೆ ನೋಡಿದರೆ, ಕಳೆದ 8 ತಿಂಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದರು. ಆದರೆ ಆಗ ಹೀರೊ ಯಾರು ಎನ್ನುವುದು ಗೊತ್ತಿರಲಿಲ್ಲ. ಇನ್ನು ಸಂದೀಪ್ ಸಿಂಗ್ ಈ ಸಿನಿಮಾ ನಿಜಕ್ಕೂ ತೆರೆಗೆ ತರುತ್ತಾರಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಸಂದೀಪ್ ಮಾಡಿರುವ ಹಿಂದಿನ ಸಿನಿಮಾಗಳು.

ಸಹ ನಿರ್ಮಾಪಕರಾಗಿ ಒಂದಷ್ಟು ಸಿನಿಮಾಗಳನ್ನು ಸಂದೀಪ್ ಸಿಂಗ್ ನಿರ್ಮಿಸಿದ್ದಾರೆ. ಅದರಲ್ಲಿ ಬಯೋಪಿಕ್ ಚಿತ್ರಗಳೂ ಇವೆ. 5 ವರ್ಷಗಳ ಹಿಂದೆ ಪಿಎಂ ನರೇಂದ್ರ ಮೋದಿ ಬಯೋಪಿಕ್ ಸಿನಿಮಾ ಮಾಡಿದ್ದರು. ಅದು ಅಷ್ಟಾಗಿ ಸದ್ದು ಮಾಡಲಿಲ್ಲ. ಬಳಿಕ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಕಥೆಯನ್ನು ತೆರೆಗೆ ತಂದರು. ಅದು ಗೆಲ್ಲಲಿಲ್ಲ. ‘ಸ್ವಾತಂತ್ರ್ಯ ವೀರ ಸಾವರ್ಕರ್’ ಬಯೋಪಿಕ್ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಒಂದಷ್ಟು ವಿವಾದಕ್ಕೂ ಈ ಚಿತ್ರ ಕಾರಣವಾಯ್ತು. ಎಲ್ಲಕ್ಕಿಂತ ಮುಖ್ಯವಾಗಿ ಟಿಪ್ಪು ಸುಲ್ತಾನ್ ಕಥೆಯನ್ನು ತೆರೆಗೆ ತರುವುದಾಗಿ ಸಂದೀಪ್ ಸಿಂಗ್ ಘೋಷಿಸಿದ್ದರು. ಬಳಿಕ ಬೆದರಿಕೆ ಕರೆಗಳು ಬರುತ್ತಿದೆ, ಹಾಗಾಗಿ ನಾನು ಈ ‘ಟಿಪ್ಪು’ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಹಿಂದೆ ಸರಿದಿದ್ದರು. ಸದ್ಯ ಶಿವಾಜಿ ಬಯೋಪಿಕ್ ಕೂಡ ಸೆಟ್ಟೇರುವ ಮುನ್ನವೇ ಭಾರೀ ಚರ್ಚೆ ಹುಟ್ಟಾಕ್ಕಿದೆ. ಹಾಗಾಗಿ ನಿಜಕ್ಕೂ ಸಿನಿಮಾ ಸುಸೂತ್ರವಾಗಿ ನಿರ್ಮಾಣವಾಗಿ ತೆರೆಗೆ ಬರುತ್ತಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಿರ್ಮಾಪಕರಾಗಿರುವ ಸಂದೀಪ್ ಏಕಾಏಕಿ ಇಷ್ಟು ದೊಡ್ಡ ಸಿನಿಮಾ ನಿರ್ದೇಶನ ಮಾಡಿ ಗೆಲ್ತಾರಾ? ಎನ್ನುವುದು ಕೆಲವರ ಅನುಮಾನ. ರಿಷಬ್ ಶೆಟ್ಟಿ ಈ ಸಿನಿಮಾ ಮಾಡುವುದು ಬೇಡ ಎಂದು ಒಂದಷ್ಟು ಜನ ಹೇಳುತ್ತಿದ್ದಾರೆ. ಈ ಬಗ್ಗೆ ರಿಷಬ್ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.

ವಿಜಯ್ ಭರಮಸಾಗರ, ಫಿಲ್ಮಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss