Sandalwood: ಸರೆಗಮಪ ರಿಯಾಲಿಟಿ ಶೋನಲ್ಲಿ ನೀನೇ ರಾಮಾ ನೀನೇ ಶಾಮಾ ಎನ್ನುವ ಹಾಡು ಹೇಳಿ, ಎಲ್ಲರ ಹುಬ್ಬೇರುವಂತೆ ಮಾಡಿದ ಗಾಯಕಿ ಸುಹಾನಾ ಸೈಯದ್ ತಮ್ಮ ಗಾಯನ ಪಯಣದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಹಾಡಿನ ತುಣುಕುಳನ್ನು ಹರಿಬಿಡುತ್ತಿರುತ್ತಾರೆ.
ಇದೀಗ ಅವರು ಮಾಡಿರುವ 1 ಪೋಸ್ಟ್ ನೋಡಿ ಹಲವರು ಹೌಹಾರಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಸುಹಾನಾ ತನ್ನ ನೆಚ್ಚಿನ ಹುಡುಗನನ್ನು ಪರಿಚಯಿಸಿದ್ದಾರೆ. ಅವರ ಹೆಸರು ನಿತೀನ್ ಶಿವಾಂಶ್. ಇವರು ರಂಗಭೂಮಿ ಕಲಾವಿದರಾಗಿದ್ದು, ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿರುವ ಸುಹಾನಾ,
ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ
ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ,
ಪ್ರೇಮಕ್ಕೆ ಕಾರಣ ಇಲ್ಲ.
ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ…
ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ.
ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು..
ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ..
ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ..
ನಿಮ್ಮ ಆಶೀರ್ವಾದವಿರಲಿ !” ಎಂದು ಬರೆದು, ತಮ್ಮ ಪ್ರೀತಿಯನ್ನು ಸುಹಾನಾ ಈ ರೀತಿ ಪರಿಚಯಿಸಿದ್ದಾರೆ.
ಸುಹಾನಾ ಮುಸ್ಲಿಂ ಆಗಿದ್ದು, ನಿತೀನ್ ಹಿಂದೂ. ಹಾಗಾಗಿ ಈಗ ಇವರ ವಿವಾಹಕ್ಕೆ ವಿರೋಧವಾಗುವ ಎಲ್ಲ ಸಾಧ್ಯತೆಗಳಿದೆ ಅನ್ನೋದು ಹಲವರ ಮಾತು.
ಆದರೆ ಸುಹಾನಾ ಹೇಳುವಂತೆ ಈ ಮುಂಚೆ ನೀನೇ ರಾಮಾ ಹಾಡು ಹಾಡಿದಾಗಲೂ, ಅವರಿಗೆ ಫತ್ವಾ ಬಂದಿತ್ತು. ಅದನ್ನೇ ಅವರು ನಿರ್ಲಕ್ಷಿಸಿ, ಮುಂದುವರೆದಿದ್ದರು. ನನ್ನ ತಾಯಿಗೆ ಅವಮಾನವಾದಾಗ, ನನಗೆ ಸಮಸ್ಯೆ ಬಂದಾಗ ಬರದಿದ್ದವರು, ಈಗ ಧರ್ಮದ ಬಗ್ಗೆ ಬುದ್ಧಿ ಹೇಳಲು ಬರುತ್ತಿದ್ದಾರೆ. ನಾನು ಅವರ ವಿರೋಧಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದರು.
ಅದೇ ರೀತಿ ಈಗಲೂ ಅವರ ಪ್ರೀತಿಗೆ ಧರ್ಮ ಅಡ್ಡ ಬಂದಿದ್ದು, ವಿರೋಧಗಳು ನನಗೆ ಹಳೆಯದ್ದು, ಅದೆಲ್ಲವನ್ನೂ ನಾನು ಎದುರಿಸುತ್ತೇನೆ. ಎಲ್ಲ ಧರ್ಮದಲ್ಲೂ ನಂಬಿಕೆ ಇದೆ. ಎರಡೂ ಧರ್ಮವನ್ನು ನಾವು ಫಾಲೋ ಮಾಡುತ್ತೇನೆ ಎಂದು ಸುಹಾನಾ ಹೇಳಿದ್ದಾರೆ.