Friday, August 29, 2025

Latest Posts

ಕಾಂಗ್ರೆಸ್ ಸರ್ಕಾರಕ್ಕೆ ಸಾರಾ ಮಹೇಶ್ ಎಚ್ಚರಿಕೆ !

- Advertisement -

ಧರ್ಮಸ್ಥಳ ಕ್ಷೇತ್ರಕ್ಕೆ ಜೆಡಿಎಸ್‌ ಮುಖಂಡರು ನೂರಾರು ಕಾರುಗಳಲ್ಲಿ ದಂಡಾಗಿ ಯಾತ್ರೆಗೆ ಹೋಗಿದ್ದಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಬಯಸಿದವರಿಗೆ ಶಿಕ್ಷೆಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಲಿದ್ದೇವೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್‌ ತಿಳಿಸಿದರು.

ದೇಶದಲ್ಲಿ ವ್ಯವಸ್ಥಿತವಾಗಿ ಧಾರ್ಮಿಕ ಕಾರ್ಯಕ್ರಮ, ದಾಸೋಹ, ಶಿಕ್ಷಣ, ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತೇಜಿಸುವ ಕಾರ್ಯಕ್ರಮ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಹಕಾರ ನೋಡಿರುವ ಧರ್ಮಸ್ಥಳ ಹೆಸರನ್ನು ಹಾಳುಗೆಡವಲು ಅಪಪ್ರಚಾರ ಮಾಡಲಾಗಿದ್ದು, ಇದರ ಹಿಂದಿರುವ ಮೂಲದ ಬಗ್ಗೆ ತಿಳಿದು ಅವರಿಗೆ ಶಿಕ್ಷೆ ನೀಡಬೇಕು. ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ದ ಕಾಯ್ದೆ ರೂಪುಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುತ್ತಾರೆ. ಆದರೆ ನನ್ನ ಕ್ಷೇತ್ರದ ನಾಡ ಕಚೇರಿಗಳಲ್ಲಿ ಕೆಲಸ ಮಾಡುವ ಕಂಪ್ಯೂಟ‌ರ್ ಆಪರೇಟರ್‌ಗಳಿಗೆ ಎರಡೂವರೆ ವರ್ಷದಿಂದ ವೇತನ ಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಮಂಜೂರಾಗಿದ್ದ ಮನೆಗಳಿಗೆ ಇನ್ನು 2, 3ನೇ ಬಿಲ್ ಬಿಡುಗಡೆ ಆಗಿಲ್ಲ. ಕೇಂದ್ರ ಸರ್ಕಾರದಿಂದ ಮಾತ್ರ ಮನೆಗಳನ್ನು ನೀಡಲಾಗಿದೆ. ಹೀಗಿದ್ದಾಗ ಕೆಆರ್‌ಎಸ್ ಕಟ್ಟಲು ಚಿನ್ನಾಭರಣ ಗಿರವಿಯಿಟ್ಟ ಕುಟುಂಬವನ್ನು, ಬಡಬಗ್ಗರ ಆಸ್ತಿ ಗಿರವಿ ಇಟ್ಟು 7 ಸಾವಿರ ಕೋಟಿ ಸಾಲ ಮಾಡುವವರಿಗೆ ಹೋಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ಸ್ಥಾನ ಕುಸಿಯಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಅರಮನೆ ಸಿಕ್ಕಿತೆಂದು ಇದ್ದ ಮನೆ ದೂರುವವರಲ್ಲ. ದೇವೇಗೌಡ ಅವರು ನಂಬಿಕಸ್ಥ ಬೇಕು ಎಂದು ಹಣಕಾಸು ಸಚಿವ ಸ್ಥಾನ ನೀಡಿದ್ದರು ಎಂದು ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದರು. ಹಾಗಿದ್ದರೆ ಆ ಖಾತೆಯನ್ನು ಏಕೆ ಉಳಿಸಿಕೊಂಡಿದ್ದಾರೆ. ನಿಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳ ಬಗ್ಗೆ ನಿಮಗೆ ನಂಬಿಕೆಯಿಲ್ಲವೇ ಎಂದು ಪ್ರಶ್ನಿಸಿದ ಅವರು, ದೇವೇಗೌಡ ಅವರಿಗಿರುವ ವಿಶಾಲ ಭಾವನೆ ನಿಮಗಿಲ್ಲಎಂದು ದೂರಿದರು.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss