ಸಚಿವ ಸತೀಶ್ ಜಾರಕಿಹೊಳಿಯನ್ನು ಬೆಂಬಲಿಸಿದ್ದಕ್ಕೆ, ಗಂಡನ ಕೊರಳಪಟ್ಟಿ ಹಿಡಿದು ಪತ್ನಿಯೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 8ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ನಡೆದಿತ್ತು. ಸೋಮವಾರ ಮಧ್ಯಾಹ್ನ ಮದಿಹಳ್ಳಿ ಗ್ರಾಮದಲ್ಲಿ, ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದೊಡ್ಡವರೇ ತೊಡೆ ತಟ್ಟಿ ಅಖಾಡಕ್ಕೆ ನಿಂತಿದ್ದು, ಇಡೀ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದೆ.
ಸದ್ಯ, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಗ್ರಾಮದ ಪಿಕೆಪಿಎಸ್ ಸದಸ್ಯರು ಸೇರಿ, ಒಬ್ಬರಿಗೆ ಮತದಾನ ಮಾಡುವ ಹಕ್ಕನ್ನು ನೀಡುತ್ತಾರೆ. ಹೀಗಾಗಿ ಸಭೆ ಸೇರಲಾಗಿತ್ತು. 1 ವಾರದಿಂದ ನಾಪತ್ತೆಯಾಗಿದ್ದ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ, ದಿಢೀರ್ ಆಗಿ ಸಭೆಗೆ ಆಗಮಿಸಿದ್ದಾರೆ. ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಆಗಮಿಸಿದ್ದರು. ಇದೇ ವೇಳೆ ಮಾರುತಿ ಪತ್ನಿ ಕೂಡ ಸಭೆ ನಡೀತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಗಂಡ 1 ವಾರದಿಂದ ಕಾಣಿಸದೇ ಇದ್ದಿದ್ದಕ್ಕೆ ಆಕ್ರೋಶಗೊಂಡಿದ್ದ ಪತ್ನಿ, ಪತಿಯ ಕೊರಳು ಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿ ಎಳೆದಾಡಿದ್ದಾರೆ. ಅಲ್ಲೇ ಇದ್ದ ಸಚಿವ ಸತೀಶ್ ಜಾರಕಿಹೊಳಿ ಶಾಕ್ ಆಗಿದ್ರು. ತಕ್ಷಣವೇ ಇಬ್ಬರ ಜಗಳ ಬಿಡಿಸಿ ಮಾರುತಿ ಸನದಿಯನ್ನು ಮತ್ತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ತಮ್ಮೊಟ್ಟಿಗೆ ಕರೆದುಕೊಂಡು ಹೋದರು. ಇತ್ತ ಸ್ಥಳಕ್ಕೆ ಬಂದ ಮಾಜಿ ಸಂಸದ ರಮೇಶ್ ಕತ್ತಿ ನೇರವಾಗಿ, ಸತೀಶ್ ಜಾರಕಿಹೊಳಿ ಹಾಗೂ ತಂಡಕ್ಕೆ ಸವಾಲು ಹಾಕಿದರು.
ಗಲಾಟೆ ಶುರುವಾಗುತ್ತಿದ್ದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯೊಳಗೆ ಹೋದ ಸತೀಶ್ ಜಾರಕಿಹೊಳಿ, ಕೆಲವೇ ಹೊತ್ತಲ್ಲಿ ತಮ್ಮ ಬೆಂಬಲಿಗರೊಂದಿಗೆ ಹೊರಟು ಹೋಗಿದ್ದಾರೆ. ಇದಾದ ಬಳಿಕ ಮಾಜಿ ಸಂಸದ ರಮೇಶ್ ಕತ್ತಿ ಪರ ಬೆಂಬಲಿಗರು ಕಚೇರಿ ಒಳಗೆ ಬಂದು, ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತ ಹೊರಗೆ ಜಮಾಯಿಸಿದ್ದ, ಸತೀಶ್ ಜಾರಕೊಹೊಳಿ ಹಾಗೂ ರಮೇಶ್ ಕತ್ತಿ ಬೆಂಬಲಿಗರ ನಡುವೆ, ವಾಗ್ವಾದ ಶುರುವಾಗಿದೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಜಗಳ ಬಿಡಿಸಿ, ಎರಡು ಗುಂಪಿನವರನ್ನು ಅಲ್ಲಿಂದ ಕಳಿಸಿದ್ದಾರೆ.