ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ ಅಂದ್ರೆ ಇ.ಡಿ ಬಿಗ್ ಶಾಕ್ ನೀಡಿದೆ. ಅಬಕಾರಿ ಅಕ್ರಮ ಹಾಗೂ ಹತ್ತು ಹಲವು ಬಾರ್ ಲೈಸೆನ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರಿಯ ಮನೆ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬುಧವಾರ ಬೆಳಗ್ಗೆಯೇ ಇ.ಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು, ಬೆಳಗಾವಿ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಇರುವ ಸಚಿವರ ನಿವಾಸಗಳು ಮತ್ತು ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಮನೆ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಷ್ಟೇ ಅಲ್ಲ, ಸಚಿವರ ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಅಬಕಾರಿ ಆಯುಕ್ತ ಮಂಜುನಾಥ್ ಹಲವು ವ್ಯವಹಾರಗಳಲ್ಲಿ ಪಾಲುದಾರರು ಎನ್ನಲಾಗಿದ್ದು, ಇವರ ಮನೆಗಳ ಮೇಲೂ ದಾಳಿ ಮುಂದುವರಿದಿದೆ. ಮೂಲಗಳ ಪ್ರಕಾರ, ಸುಮಾರು 18 ಅನಧಿಕೃತ ಬಾರ್ ಲೈಸೆನ್ಸ್ಗಳನ್ನು ನೀಡಲು ಸಹಾಯ ಮಾಡಲಾಗಿದೆ ಎಂಬ ಗಂಭೀರ ಆರೋಪ ಸಚಿವರ ಮೇಲಿದೆ. ಇದರ ಜೊತೆಗೆ, ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ಹಣ ಅಕ್ರಮ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿಂದೆ ಪತ್ತೆಯಾಗಿದ್ದ ಸುಮಾರು 3 ಕೋಟಿ ರೂಪಾಯಿ ಅಕ್ರಮ ವಿದೇಶಿ ಹಣದ ಪ್ರಕರಣದ ತನಿಖೆಯನ್ನು ಇ.ಡಿ ಚುರುಕುಗೊಳಿಸಿದೆ.
ಅಬಕಾರಿ ಅಕ್ರಮ ಹಾಗೂ ಬಾರ್ ಲೈಸೆನ್ಸ್ ಹಗರಣದ ಕೊಂಡಿ ಈಗ ಸತೀಶ್ ಜಾರಕಿಹೊಳಿ ಅವರ ಮನೆ ಬಾಗಿಲಿಗೆ ಬಂದಿದ್ದು, ಅಧಿಕಾರಿಗಳ ತನಿಖೆಯಿಂದ ಮುಂದಿನ ದಿನಗಳಲ್ಲಿ ಯಾವೆಲ್ಲಾ ಸತ್ಯ ಹೊರಬರಲಿದೆ ಎಂಬುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.




