Sunday, November 9, 2025

Latest Posts

ಸತೀಶ್ ಜಾರಕಿಹೊಳಿ ದೆಹಲಿ ಮಿಷನ್ : ಖರ್ಗೆ ಭೇಟಿ ಹಿಂದೆ ರಾಜಕೀಯ ಚೆಸ್!

- Advertisement -

ನಾಯಕತ್ವ ಬದಲಾವಣೆಯ ಕುರಿತ ಸದ್ದು ಗದ್ದಲದ ನಡುವೆ ಸಚಿವ ಸತೀಶ್ ಜಾರಕಿಹೊಳಿಯವರು ದಿಢೀರ್ ನವದೆಹಲಿಗೆ ತೆರಳಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನವೆಂಬರ್ ಕ್ರಾಂತಿಯ ಸದ್ದುಗಳ ನಡುವೆ ನಡೆದಿರುವ ಈ ಭೇಟಿ ಹಲವು ಊಹಾಪೋಹಗಳಿಗೆ ತಲೆದೋರಿಸಿದೆ.

ಮೂರು ದಿನಗಳ ಕಾಲ ದೆಹಲಿಯಲ್ಲೇ ತಂಗಲಿರುವ ಸತೀಶ್ ಜಾರಕಿಹೊಳಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ದೆಹಲಿ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತಿವೆ. ಹೈಕಮಾಂಡ್ ಹುದ್ದೆ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೂ ಸತೀಶ್ ಸಿದ್ಧರಾಗಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ಇನ್ನೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 11ರಂದು ದೆಹಲಿಗೆ ತೆರಳಲಿದ್ದು, ಅದಕ್ಕೂ ಮುನ್ನ ಸತೀಶ್ ಭೇಟಿ ನೀಡಿರುವುದು ಕುತೂಹಲ ಹೆಚ್ಚಿಸಿದೆ. ಆದರೆ, “ರಾಜಕಾರಣಿಗಳು ವಿವಿಧ ಕೆಲಸಗಳಿಗಾಗಿ ದೆಹಲಿಗೆ ಹೋಗುತ್ತಾರೆ, ಇದನ್ನು ರಾಜಕೀಯಗೊಳಿಸಬಾರದು” ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಖರ್ಗೆ ಸತೀಶ್ ಅವರಿಗೆ ಅಪಾಯಿಂಟ್ಮೆಂಟ್ ನೀಡಿದ್ದರ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಇದು ಯಾವುದೇ ರಾಜಕೀಯ ಬೆಳವಣಿಗೆಯ ಭಾಗವಲ್ಲ ಎಂದು ಹೇಳಿದ್ದಾರೆ. ಅವರು ವ್ಯಂಗ್ಯವಾಗಿ, ಎಐಸಿಸಿ ಅಧ್ಯಕ್ಷರಲ್ಲದಿದ್ದರೆ, ಆರ್‌ಎಸ್‌ಎಸ್ ಮುಖ್ಯಸ್ಥರೂ ಸತೀಶ್ ಅವರಿಗೆ ಅಪಾಯಿಂಟ್ಮೆಂಟ್ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ 2028ರವರೆಗೆ ಸಿಎಂ ಆಗಿ ಮುಂದುವರಿಯುತ್ತಾರೆ, ನಂತರ ಶಿವಕುಮಾರ್ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಇಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ ಮತ್ತು ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗಳಲ್ಲಿ ಬದಲಾವಣೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss