ಹುಕ್ಕೇರಿ ಸಹಕಾರ ಸಂಘದ ಚುನಾವಣೆಯಲ್ಲಿ, ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ಬಣ ಗೆದ್ದು ಬೀಗಿದೆ. ಎಲ್ಲಾ 15 ಸ್ಥಾನಗಳನ್ನು ಕತ್ತಿ ಬಣ ಕ್ಲೀನ್‌ಸ್ವೀಪ್ ಮಾಡಿದೆ. ಗೆಲುವು ಸಾಧಿಸುವ ಹಠದಲ್ಲಿದ್ದ ಜಾರಕಿಹೊಳಿ ಸಹೋದರರಿಗೆ ಭಾರೀ ಮುಖಭಂಗವಾಗಿದೆ. ಗೆಲುವಿನ ಸಂಭ್ರಮದಲ್ಲಿ ರಮೇಶ್ ಕತ್ತಿ ಬೆಂಬಲಿಗರಿಂದ, ಸತೀಶ್ ಜಾರಕಿಹೊಳಿ ಬೆಂಬಲಿಗರಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಹುಚ್ಚಾಟ ಮೆರೆದಿದ್ದಾರೆ.
ಸ್ವಾಭಿಮಾನಕ್ಕೆ ಮತ ನೀಡಿ ಅಂತಾ ಭಾವನಾತ್ಮಕ ಕಾರ್ಡ್ ಪ್ಲೇ ಮಾಡಿದ್ದ ಕತ್ತಿ, ಅಂತಿಮವಾಗಿ ಸಕ್ಸಸ್ ಆಗಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಹಣಿಯಲು ಕಾಂಗ್ರೆಸ್‌ನ ಮಾಜಿ ಶಾಸಕ ಎ.ಬಿ. ಪಾಟೀಲ್, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ, ಬಿಜೆಪಿ ಮುಖಂಡ ಬಸವರಾಜ ಹುಂದ್ರಿ ಒಟ್ಟಾಗಿದ್ದರು. ಇದರಿಂದ ಕತ್ತಿ ಪ್ಯಾನಲ್ ಗೆದ್ದು ಬೀಗಿದೆ.
ಮತ್ತೊಂದೆಡೆ ಕಿತ್ತೂರಿನ ಎಂ.ಕೆ. ಹುಬ್ಬಳ್ಳಿಯ, ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಚೆನ್ನರಾಜ ಹಟ್ಟಿಹೊಳಿ ಗೆದ್ದು ಬೀಗಿದ್ದಾರೆ. ತಮ್ಮೆಲ್ಲ ಬೆಂಬಲಿಗರನ್ನ ಗೆಲ್ಲಿಸಿಕೊಳ್ಳುವ ಮೂಲಕ, ಸಕ್ಕರೆ ಕಾರ್ಖಾನೆ ಮೇಲೆ ಹಿಡಿತ ಸಾಧಿಸಿದ್ದಾರೆ.

ಇದೇ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾರರು ಗೆಲ್ಲಿಸಿದ್ದಾರೆ. ಸಾಕಷ್ಟು ಪೈಪೋಟಿಯಿಂದ ಚುನಾವಣೆ ನಡೆಯಿತು. ಮಲಪ್ರಭಾ ಸಕ್ಕರೆ ಕಾರ್ಖಾನೆ ಗತವೈಭವ ತರುವುದೇ ನಮ್ಮ ಗುರಿ. ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.




