www.karnatakatv.net :ರಾಯಚೂರು :ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂತಾರಲ್ಲ ಹಾಗಾಗಿದೆ ಇಲ್ಲೊಂದು ಬಹುಕೋಟಿ ವೆಚ್ಚದ ವಸತಿ ಶಾಲೆಯ ಸ್ಥಿತಿ. ಬಹು ಕೋಟಿ ವೆಚ್ಚದಲ್ಲಿ ಕಟ್ಟಡ ಏನೋ ನಿರ್ಮಾಣವಾಗಿದೆ, ಆದರೆ ಸಿದ್ಧವಾಗಿ ಒಂದು ವರ್ಷ ಗತಿಸಿದರೂ ಈ ವಸತಿ ಶಾಲೆಗೆ ಉದ್ಘಾಟನಾ ಭಾಗ್ಯ ಒದಗಿ ಬಂದಿಲ್ಲ.
ಹೌದು, ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಮಲ್ಲಟ ಎನ್ನುವ ಗ್ರಾಮದಲ್ಲಿ 2017 ರಲ್ಲಿ ಪರಿಶಿಷ್ಟ ಪಂಗಡದ ನೂತನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಮಂಜೂರಾಗಿದ್ದವು ಅದನ್ನು ಹೈದ್ರಾಬಾದ್ ಮೂಲದ ಕೆಎಂವಿ ಪ್ರಾಜೆಕ್ಟ್ ಗೆ 18 ತಿಂಗಳಿಗೆ ಈ ಶಾಲೆ ಕಟ್ಟಡ ಕಟ್ಟೋದಕ್ಕೆ ಗುತ್ತಿಗೆ ನೀಡಲಾಗಿತ್ತು. ಇನ್ನೂ ಈ ಶಾಲೆಗಳ ಉದ್ಘಾಟನೆ ಮಾಡಿ ಮಕ್ಕಳ ಕಲಿಕೆಗೆ ಯಾರು ಅನುಕೂಲ ಮಾಡಿಕೊಟ್ಟಿಲ್ಲ.
ಶಾಲೆಗಳ ಕರೆಂಟ್, ನೀರಿನ ಸೌಕರ್ಯ ಹಾಗೂ ವಿಶಾಲವಾದ ಮೈದಾನ, ರಸ್ತೆ ಎಲ್ಲಾ ಇದ್ದು, ಮಕ್ಕಳಿಗೆ ಮಾತ್ರ ಏನು ಇಲ್ಲದ ಹಾಗೆ ಆಗಿದೆ. ಮಾಜಿ ಶಾಸಕ ಹಂಪಯ್ಯ ನಾಯಕರ ಕಾಲಾವಧಿಯಲ್ಲಿ ಭೂಮಿ ಸಮಸ್ಯೆ ಇದ್ದರೂ ಗ್ರಾಮಸ್ಥರ ಮನವೊಲಿಸಿ ಭೂಮಿ ಪಡೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಕನಸಿನ ಶಾಲೆ ಇದು. ಹಲವಾರು ತೊಂದರೆಗಳ ನಡುವೆ ಶಾಲೆ ಸಿದ್ದವಾದರು ಕೂಡಾ ಉದ್ಘಾಟನಾ ಮಾತ್ರ ಆಗಿಲ್ಲ.
ಹಾಗೆ ನೋಡಿದರೆ ಪರಿಶಿಷ್ಟ ಪಂಗಡದ ಇಲಾಖೆಗೆ ಶಾಲೆಯ ಕಟ್ಟಡವನ್ನು 2020 ರಲ್ಲಿಯೇ ಹಸ್ತಾಂತರ ಮಾಡಲಾಗಿದೆ. ಸ್ಥಳೀಯ ಶಾಸಕರು , ಅಧಿಕಾರಿಗಳ ಇಚ್ಛಾಶಕ್ತಿ ಕೊರತರಯಿಂದ ಇಂದು ಈ ಬಹುಕೋಟಿ ವೆಚ್ಚದ ವಸತಿ ಶಾಲೆ ಪಾಳು ಬಿದ್ದ ಬಂಗಲೆಯಂತಾಗಿದೆ .
ಒಟ್ನಲ್ಲಿ ಈ ಭಾಗದ ಮಕ್ಕಳ ಕಲಿಕೆಗೆ ಅಂತ ನಿರ್ಮಿಸಲಾದ ಕನಸಿನ ಶಾಲೆ ಇಂದು ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡುತ್ತಿದೆ. ಹಾಗಾಗಿ ಆದಷ್ಟು ಬೇಗ ಶಾಲೆಯನ್ನು ಉದ್ಘಾಟಿಸಬೇಕು ಅನ್ನೋದು ಸ್ಥಳೀಯರ, ಮತ್ತು ಮಾಜಿ ಶಾಸಕರ ಒತ್ತಾಯವಾಗಿದೆ..
ಅನಿಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು