ಧರ್ಮಸ್ಥಳಕ್ಕೆ ಬೆಂಬಲ ವ್ಯಕ್ತಪಡಿಸುವ ಹೆಸರಿನಲ್ಲಿ ರಾಜಕೀಯ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಿಗೆ ಬೆಂಬಲ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಕೂಡ ಶಾಂತಿ ಯಾತ್ರೆ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿದೆ.
ಧರ್ಮಸ್ಥಳ ಪ್ರಕರಣ ಸಂಬಂಧ SIT ರಚಿಸಿದ ಬಳಿಕ ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ಭೇಟಿ ನೀಡದೆ ದೂರ ಉಳಿದಿದ್ದರು. ಇದೀಗ ತಮ್ಮ ಪಕಷ್ವು ಹಿಂದೂ ಧಾರ್ಮಿಕ ಕೇಂದ್ರಗಳನ್ನು ವರೋಧಿಸುವುದಿಲ್ಲ ಎಂಬ ಸಂದೇಶ ಸಾರಲು, ಬಿಜೆಪಿ ಹಾಗೂ ಜೆಡಿಎಸ್ ಯಾತ್ರೆಗೆ ಕೌಂಟರ್ ನೀಡಲು ತಾವೂ ಕೂಡ ಯಾತ್ರೆಗೆ ನಡೆಸಲು ಮುಂದಾಗಿದೆ.
ಯೋಜನೆಯ ಭಾಗವಾಗಿ, ಶಾಸಕ ಕೆ. ಹರೀಶ್ ಗೌಡ ನೇತೃತ್ವದಲ್ಲಿ 2,000 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೆಪ್ಟೆಂಬರ್ 3 ರಂದು ‘ಶಾಂತಿ ಯಾತ್ರೆ’ ಅಡಿಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಚಾಮರಾಜನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು ಅವರು, ಧರ್ಮಸ್ಥಳಕ್ಕೆ ಬೆಂಬಲ ನೀಡಲು ಆಗಮಿಸುವವರಿಗೆ ಸುಮಾರು 30 ಬಸ್ಸುಗಳು ಮತ್ತು ಹಲವಾರು ಖಾಸಗಿ ವಾಹನಗಳ ಮೂಲಕ ಧರ್ಮಸ್ಥಳ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಿದರು.
ಧರ್ಮಸ್ಥಳವು 800 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಪವಿತ್ರ ದೇವಾಲಯವಾಗಿದೆ. ದೇಶಾದ್ಯಂತದ ಸಾಕಷ್ಟು ಮಂದಿ ಭಕ್ತರು ಆಶೀರ್ವಾದ ಪಡೆಯಲು ಅಲ್ಲಿಗೆ ಹೋಗುತ್ತಾರೆ. ಇತ್ತೀಚೆಗೆ, ಕೆಲವು ಯೂಟ್ಯೂಬರ್‌ಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅವಹೇಳನಕಾರಿ ಹೇಳಿಕೆಗಳನ್ನು ಮಾಡಿದ್ದಾರೆ. ಸರ್ಕಾರ ಆರಂಭಿಸಿರುವ ಎಸ್‌ಐಟಿ ತನಿಖೆಯನ್ನು ಧರ್ಮಾಧಿಕಾರಿ ಈಗಾಗಲೇ ಸ್ವಾಗತಿಸಿದ್ದಾರೆ. ಇದೀಗ ನಮ್ಮ ಬೆಂಬಲ ವ್ಯಕ್ತಪಡಿಸಲು ನಾವು ಧರ್ಮಸ್ಥಳ ಭೇಟಿಯನ್ನು ಕೈಗೊಳ್ಳುತ್ತಿದ್ದೇವೆಂದು ತಿಳಿಸಿದರು.
ಮೈಸೂರು ಅರಮನೆ ಬಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ‘ಶಾಂತಿ ಯಾತ್ರೆ ಬುಧವಾರ ಬೆಳಿಗ್ಗೆ ಪ್ರಾರಂಭವಾಗಲಿದೆ. ಈ ಯಾತ್ರೆಯಲ್ಲಿ ಭಾಗವಹಿಸುವವರು ಧರ್ಮಸ್ಥಳದ ಸ್ವಾಗತ ಕಮಾನಿನಿಂದ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ, ಹೆಗ್ಗಡೆ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಮತ ಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿವೆ, ಆದರೆ ಕಾಂಗ್ರೆಸ್ ಧರ್ಮದ ಪರವಾಗಿ ನಿಂತಿದೆ ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ