ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಸನತ್ಕುಮಾರ, ಅವ್ವ ಪತ್ರಕರ್ತೆ ಪ್ರಶಸ್ತಿಗೆ ಸುನೀತಾ ಕುಲಕರ್ಣಿ,ನಿರ್ಮಲಾ ಕುದರಿ ಭಾಜನ

Hubli News: ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಸನತ್ಕುಮಾರ ಬೆಳಗಲಿ ಭಾಜನರಾಗಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಟ್ರಸ್ಟ್ ನಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಅವ್ವ ಪತ್ರಕರ್ತೆ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯವರಾದ ಸುನೀತಾ ಕುಲಕರ್ಣಿ ಅವರಿಗೆ ಹಾಗೂ ನಿರ್ಮಲಾ ಕುದರಿ ಅವರಿಗೆ ಸಂದಿದೆ.

ಜೀವಮಾನ ಸಾಧನೆ ಪ್ರಶಸ್ತಿ 11 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನ ಒಳಗೊಂಡಿದೆ ಅದರಂತೆಯೇ ಅವ್ವ ಪತ್ರಕರ್ತೆ ಪ್ರಶಸ್ತಿ ತಲಾ ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಗೌರವ ಸನ್ಮಾನಗಳನ್ನು ಒಳಗೊಂಡಿದೆ. ದಿ. 27ರಂದು ರವಿವಾರ ನಡೆಯುವ ಕಾರ್ಯಕ್ರಮದಲ್ಲಿ ಈ ಮೇಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವದು.

ಸನತ್ಕುಮಾರ ಬೆಳಗಲಿಯವರು ಈ ಬಾರಿ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಬಾಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು, ಸಾವಳಗಿ ಗ್ರಾಮದವರು. ಸನತ್ಕುಮಾರ ಬೆಳಗಲಿ ಅವರು ಕಿರಿಯ ವಯಸ್ಸಿನಿಂದಲೂ ಜಾತ್ಯತೀತ, ಪ್ರಗತಿಪರ ಚಿಂತನೆಗಳತ್ತ ಒಲವು ಇಟ್ಟುಕೊಂಡಿರು ಇವರು, ಸಾಹಿತಿಗಳಾದ ಬಸವರಾಜ ಕಟ್ಟೀಮನಿ, ನಿರಂಜನ, ಜಿ.ರಾಮಕೃಷ್ಣ ಮತ್ತಿತರ ಸಾಹಿತಿಗಳ ಸಂಪರ್ಕ. ಮತ್ತು ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಬಂಡಾಯದ ಮನೋಭಾವದಲ್ಲಿ ಬೆಳೆದು ಬಂದವರು.

ಸುನೀತಾ ರವೀಂದ್ರ ಕುಲಕರ್ಣಿಯವರು ಪತ್ರಕರ್ತರಾಗಬೇಕು ಎಂಬ ಹಂಬಲ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದವರಲ್ಲ. ಆದರೂ ಸ್ಫುಟವಾದ ಬರವಣಿಗೆ, ನೈಜ ವರದಿಗಾರಿಕೆಯಿಂದ `ಸಂಜೆ ವಾಣಿ’ ಎಂಬ ಸುದ್ದಿಮನೆಯಲ್ಲಿ ಸದ್ದುಮಾಡಿದವರು ಸುನಿತಾ ರವೀಂದ್ರ ಕುಲಕರ್ಣಿ. 1992 ರಿಂದ 2017ರ ವರೆಗೆ ಸಂಜೆ ವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಲ್ಲಿ ಶ್ರೀಯುತರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರು ಪತ್ರಿಕೋದ್ಯಮಕ್ಕೆ ಆಗಮಿಸಿದ್ದು, ಗುರು ಕೃಪೆಯಿಂದಲೇ ಎಂದರೆ ತಪ್ಪಾಗಲಿಕ್ಕಿಲ್ಲ. ಮಹಾರಾಷ್ಟ್ರದ ಶ್ರೀ ಗೋಂದಾವಲೇಕರ್ ಮಹಾರಾಜರ ಕುರಿತಾಗಿ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಗುರುಗಳು 1992ರಲ್ಲಿ ಹುಬ್ಬಳ್ಳಿಯಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಗುರುಗಳ ಪರಮಭಕ್ತರಾಗಿದ್ದ ಸುನಿತಾ ಕುಲಕರ್ಣಿ ಅವರು, ದತ್ತಾವಧೂತರು ಪ್ರತಿದಿನ ಹೇಳುವ ಸತ್ಸಂಗವನ್ನು ಬರೆದುಕೊಂಡು ಸಂಜೆವಾಣಿ ಪತ್ರಿಕೆಗೆ ಪ್ರಕಟಣೆಗಾಗಿ ಕಳುಹಿಸಿಕೊಂಡುತ್ತಿದ್ದರು. ಗುರುಗಳ ಸತ್ಸಂಗವನ್ನು ಸ್ಫುಟವಾಗಿ, ತೀಕ್ಷ್ಣವಾಗಿ ದಾಖಲುಮಾಡುತ್ತಿದ್ದ ಇವರ ಬರವಣಿಗೆಯ ಶೈಲಿಯನ್ನು ಗಮನಿಸಿದ ಸಂಜೆವಾಣಿ ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಅ. ಚ. ಶಿವಣ್ಣ ಅವರು ಸುನೀತಾ ಕುಲಕರ್ಣಿ ಅವರನ್ನು ಹುಬ್ಬಳ್ಳಿಯ ಆವೃತ್ತಿಗೆ ಉಪಸಂಪಾದಕಿಯಾಗಿ ನೇಮಿಸಿದರು. ಅಲ್ಲಿಂದ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಸುನಿತಾ ಅವರು, ಹಿರಿಯ ಉಪಸಂಪಾದಕಿಯಾಗಿ, ಮುಖ್ಯವರದಿಗಾರರಾಗಿ ಹಾಗೂ 2013ರಿಂದ17 ವರೆಗೆ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಾಡೋಜ ದಿ.ಪಾಟೀಲ ಪುಟ್ಟಪ್ಪನವರ “ಪ್ರಪಂಚ” ವಾರಪತ್ರಿಕೆ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಡುವ ಮೂಲಕ ಶ್ರೀಮತಿ ನಿರ್ಮಲಾ ಕುದರಿಯವರು, ಅಮೆರಿಕಾ ದೇಶದ ಭಾರತೀಯರ ಸುದ್ದಿ,ಸಮಾಚಾರಗಳನ್ನು ಲೇಖನಗಳಾಗಿ ಪರಿವರ್ತಿಸಿ ಸಾಹಿತ್ಯದ ಮೆರವಿನೊಂದಿಗೆ ಪ್ರಕಟಗೊಳಸುತ್ತಿದ್ದರು. ದೇಶದ ಅಂದಂದಿನ ವಿದ್ಯಮಾನಗಳನ್ನು ವಿಶ್ಲೇಷಣೆಗೊಳಪಡಿಸಿ ವಿಮರ್ಶಾ ಲೇಖನಗಳನ್ನು ಸಿದ್ದಪಡಿಸಿ, “ಪಾಪು” ಕೈಯಲ್ಲಿ ಸೈ ಎನಿಸಿಕೊಂಡರು.

ನಂತರದ ದಿನಗಳಲ್ಲಿ ಸಂಜೆವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ಮಹಾನಗರ ಪಾಲಿಕೆಯ ಸಮಸ್ಯೆಗಳನ್ನು ಪತ್ರಿಕೆಯ ಮೂಲಕ ಬಿಂಬಿಸಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದು ಇವರ ವಿಶೇಷ. ನಂತರದಲ್ಲಿ ವಿಶೇಷಾಂಕಗಳ ಮೇಲ್ವಿಚಾರಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

About The Author