Sandalwood News: ಇತ್ತೀಚೆಗೆ ಲೈಂಗಿಕ ಕಿರುಕುಳ ಆರೋಪ ಸಲುವಾಗಿ ಜೈಲು ಸೇರಿರುವ ನೃತ್ಯ ನಿರ್ದೇಶಕ ಜಾನಿಮಾಸ್ಟರ್ ಇದೀಗ ಮತ್ತೊಂದು ಶಾಕ್ ಗೆ ಒಳಗಾಗಿದ್ದಾರೆ. ಹೌದು, ಫೋಕ್ಸೋ ಕೇಸ್ ಬೆನ್ನಲ್ಲೇ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಗೆ ಕೇಂದ್ರ ಸರ್ಕಾರ ಹೊಸ ಶಾಕ್ ನೀಡಿದೆ. ಜಾನಿ ಮಾಸ್ಟರ್ ಗೆ ನೀಡಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಜಾನಿ ಮಾಸ್ಟರ್ ಅವರು ತಮ್ಮ ಸಹಾಯಕ ನೃತ್ಯ ಸಂಯೋಜಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ತಮಿಳಿನ ತಿರುಚಿತ್ರಂಬಲಂ ಚಿತ್ರದ ಮೇಘಂ ಕರುಕಥ ಹಾಡಿನ ನೃತ್ಯಕ್ಕಾಗಿ ಜಾನಿ ಮಾಸ್ಟರ್ ಮತ್ತು ಸತೀಶ್ ಮಾಸ್ಟರ್ ಅವರಿಗೆ ಉತ್ತಮ ನೃತ್ಯ ಸಂಯೋಜನೆ ವಿಭಾಗದಲ್ಲಿ 2022 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಜಂಟಿಯಾಗಿ ಘೋಷಿಸಲಾಗಿತ್ತು.
ಪ್ರಶಸ್ತಿ ಪ್ರಧಾನ ಮಾಡಲು ಎರಡು ದಿನ ಬಾಕಿ ಇರುವಾಗಲೇ ಜಾನಿ ಮಾಸ್ಟರ್ ಅವರಿಗೆ ಆ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾನಿ ಮಾಸ್ಟರ್ ಸದ್ಯ ಜೈಲಿನಲ್ಲಿದ್ದಾರೆ. ಫೋಕ್ಸೋ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇದು ಬಹಳ ಗಂಭೀರವಾದ ಪ್ರಕರಣ ಎಂದು ಸರ್ಕಾರ ಪರಿಗಣಿಸಿ, ರಾಷ್ಟ್ರ ಪ್ರಶಸ್ತಿಯನ್ನು ನೀಡಿದರೆ, ಮುಜುಗರಕ್ಕೆ ಸರ್ಕಾರ ಒಳಗಾಗುವುದು ಬೇಡ ಅಂದುಕೊಂಡು, ರದ್ದುಗೊಳಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಅಕ್ಟೋಬರ್ 8ರಂದು ದೆಹಲಿಯಲ್ಲಿ ಆಯೋಜನೆಯಾಗಿದ್ದು, ರಾಷ್ಟ್ರಪತಿಗಳು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಅವರ ಸಹೋದ್ಯೋಗಿ ಹಲವು ದಿನಗಳ ಹಿಂದೆಯೇ ಗಂಭೀರವಾಗಿ ಆರೋಪಿಸಿದ್ದರು. ಹೈದರಾಬಾದ್ ಮತ್ತು ಮುಂಬೈನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಜಾನಿ ಮಾಸ್ಟರ್ ಬೆದರಿಸಿದ್ದರು. ಮತ್ತು ತಮ್ಮ ಪತ್ನಿ ಜೊತೆ ಸೇರಿ ಥಳಿಸುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು.
ಸಂತ್ರಸ್ತೆಗೆ ಈಗ 21 ವರ್ಷ. ಅಪ್ರಾಪ್ತೆ ಆದಾಗಿನಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಯನ್ನು ರದ್ದುಗೊಳಿಸಿದೆ.