ಕಾಂಗ್ರೆಸ್‌ನ ಹಿರಿಯ ಶಾಸಕ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪ್ರಸಕ್ತ ಸರ್ಕಾರದ ಆಡಳಿತಾವಧಿ ಇನ್ನೂ ಎರಡೂವರೆ ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ, ಉಪಚುನಾವಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಶಾಸಕರ ನಿಧನದ ಬಳಿಕ ಉಪಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶವಿದ್ದರೂ, ಈಗಲೇ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಶುಕ್ರವಾರ ನಡೆದ ಶಾಮನೂರು ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿಯೂ, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಯಾರು ಸ್ಪರ್ಧಿಸಬಹುದು ಎಂಬ ಗುಸುಗುಸು ಕೇಳಿಬಂದಿತು.
2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೆ ನಡೆದ ನಾಲ್ಕು ಚುನಾವಣೆಯಲ್ಲೂ ಶಾಮನೂರು ಶಿವಶಂಕರಪ್ಪ ಅವರೇ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರ ಉತ್ತರಾಧಿಕಾರಿಯಾಗಿ ಕುಟುಂಬದ ಸದಸ್ಯರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷ ಶಾಮನೂರು ಕುಟುಂಬದವರಿಗೇ ಟಿಕೆಟ್ ನೀಡಿದರೆ, ಅವರ ಪುತ್ರರಾದ ಜಿಪಂ ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಅಥವಾ ಉದ್ಯಮಿ ಎಸ್.ಎಸ್. ಗಣೇಶ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಲ್ಲದೇ, ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರ ಹೆಸರೂ ಚರ್ಚೆಯಲ್ಲಿದೆ. ಇನ್ನು ಶಾಮನೂರು ಮನೆತನದ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಪ್ರಥಮ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆ, ಕುಟುಂಬದ ಮತ್ತೊಬ್ಬ ಸೊಸೆಗೂ ಅವಕಾಶ ಸಿಗಬಹುದೆಂಬ ಲೆಕ್ಕಾಚಾರ ನಡೆಯುತ್ತಿದೆ.
ಇನ್ನೊಂದೆಡೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯ ಹೆಚ್ಚಿರುವ ಕಾರಣ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕಾಂಗ್ರೆಸ್ ಮೇಲೆ ಇದೆ. ಆದರೆ, ಇದು ಕೇವಲ ಉಳಿದ ಎರಡೂವರೆ ವರ್ಷಗಳ ಅವಧಿಗೆ ನಡೆಯುವ ಉಪಚುನಾವಣೆ ಆಗಿರುವುದರಿಂದ, ಅನುಕಂಪ ಅಲೆ ಗಮನದಲ್ಲಿಟ್ಟುಕೊಂಡು ಶಾಮನೂರು ಕುಟುಂಬದವರಿಗೇ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಇದೇ ವೇಳೆ, ಕಾಂಗ್ರೆಸ್‌ನೊಳಗಿನ ಇತರ ಆಕಾಂಕ್ಷಿಗಳೂ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಹಿಂದಿನ ಚುನಾವಣೆಯಲ್ಲಿ ಅವಕಾಶ ಸಿಗದವರು ಈ ಬಾರಿ ಟಿಕೆಟ್‌ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಬಿಜೆಪಿ ಕೂಡ ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಬಿಜೆಪಿ ಬಣ ಬಡಿದಾಟದಿಂದ ಬಳಲುತ್ತಿರುವುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ.
ಈ ನಡುವೆ, ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗಾಗಿ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಜನವರಿ 3ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಕ್ಷೇತ್ರದಲ್ಲಿ 1,13,538 ಪುರುಷರು, 1,17,479 ಮಹಿಳೆಯರು ಹಾಗೂ 47 ಇತರೆ ಮತದಾರರು ಸೇರಿ ಒಟ್ಟು 2,31,062 ಮತದಾರರಿದ್ದಾರೆ.
ನುಡಿನಮನ ಸಮಾರಂಭದಲ್ಲಿ ಶಾಮನೂರು ಕುಟುಂಬದ ಎಲ್ಲ ಸದಸ್ಯರನ್ನು ಪರಿಚಯಿಸಲಾಯಿತು. ಈ ವೇಳೆ ಶಾಮನೂರು ಅವರ ಎರಡನೇ ಪುತ್ರ, ಉದ್ಯಮಿ ಎಸ್.ಎಸ್. ಗಣೇಶ್ ಅವರು ರಾಜಕೀಯ ನಾಯಕರ ಶೈಲಿಯಲ್ಲಿ ಸಭಿಕರತ್ತ ಕೈಬೀಸಿ ಗಮನಸೆಳೆದಿದ್ದು, ಅವರೇ ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಗುಮಾನಿಗೆ ಕಾರಣವಾಯಿತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




