ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ ಮುಂದುವರೆಸಿದ್ದಾರೆ. ದಸರಾ ಹಬ್ಬದ ನಿಮಿತ್ತ ಮುಂಬೈನಲ್ಲಿ ಶಿವಸೇನೆ ಪಕ್ಷದಿಂದ ಸಾರ್ವಜನಿಕ ಸಭೆ ನಡೆಸಲಾಯ್ತು. ಆ ವೇಳೆ ಬಿಜೆಪಿಯನ್ನು ಅಮೀಬಾಗೆ ಹೋಲಿಸಿ, ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಅಮೀಬಾ ಎಲ್ಲಿ ಬೇಕಾದರೂ ತನಗೆ ಬೇಕಾದಂತೆ ಬೆಳೆಯುತ್ತದೆ. ತನಗೆ ಬೇಕಾದ ಆಕಾರವನ್ನು ಪಡೆಯುತ್ತದೆ. ವಾಸ್ತವವಾಗಿ ಇದು ಬಿಜೆಪಿಗೆ ಅನ್ವಯಿಸುತ್ತದೆ. ಬಿಜೆಪಿ ಅಮೀಬಾ ಇದ್ದಂತೆ. ರಾಜಕೀಯ ಲಾಭಕ್ಕಾಗಿ, ಎಂತಹ ಪರಿಸ್ಥಿತಿ ಇದ್ದರೂ ಬಿಜೆಪಿ ಹೊಂದಿಕೊಳ್ಳುತ್ತದೆ. ಯಾರೊಂದಿಗೆ ಬೇಕಾದ್ರೂ ಮೈತ್ರಿ ಮಾಡಿಕೊಳ್ಳುತ್ತಾರೆಂದು ಉದ್ಧವ್ ಠಾಕ್ರೆ ಟೀಕಿಸಿದ್ದಾರೆ.
ದೇಶದಲ್ಲಿ ಬಿಜೆಪಿ ಪಕ್ಷ ಎಷ್ಟು ಪಾರ್ಟಿಗಳ ಜೊತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಮಾಡಿಕೊಂಡಿರುವ ಸಣ್ಣಸಣ್ಣ ಪಾರ್ಟಿಗಳು ಬೆಳೆಯುವುದನ್ನು ನೋಡಿದ್ದೀರಾ?. ಬೆಳೆಯುವುದು ಬಿಜೆಪಿ ಮಾತ್ರ. ಅವರ ಜೊತೆ ಕೈಜೋಡಿಸಿರುವ ಪಾರ್ಟಿಗಳಿಗೆ ಇದು ಗೊತ್ತಾಗುತ್ತಿಲ್ಲ.
ಬಿಜೆಪಿಯವರು ಯಾರೊಂದಿಗಾದರೂ ರಾಜಿ ಮಾಡಿಕೊಳ್ಳುತ್ತಾರೆ. ಅಪ್ಪ ದೇಶಭಕ್ತಿ, ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ, ಮಗ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡಿಸುತ್ತಾರೆ. ಇವರು ಊರಿಗೆಲ್ಲಾ ದೇಶ ಪ್ರೇಮದ ಪಾಠವನ್ನು ಮಾಡುತ್ತಾರೆ. ಹೀಗಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪುತ್ರ, ಭಾರತೀಯ ಕ್ರಿಕೆಟ್ ಆಡಳಿತಾಧಿಕಾರಿ ಜಯ್ ಶಾ ಬಗ್ಗೆ ಲೇವಡಿ ಮಾಡಿದ್ದಾರೆ.