ಸಿನಿ ರಂಗದಲ್ಲಿ ಹ್ಯಾಟ್ರಿಕ್ ಬಾರಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಶಿವಣ್ಣ, ಸ್ಯಾಂಡಲ್ ವುಡ್ ನ ಬ್ಯುಸಿ ನಟರಲ್ಲಿ ಒಬ್ಬರು. ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಶಿವಣ್ಣನವರ ಮಾವ ಭೀಮಣ್ಣ ನಾಯ್ಕ ಅವರ ನೂತನ ಹೋಟೆಲ್ ಉದ್ಘಾಟನೆಗೆಂದು ಕುಟುಂಬ ಸಮೇತ ಶಿರಸಿಗೆ ಆಗಮಿಸಿದ್ದ ಶಿವಣ್ಣ ಕಳೆದ ಮೂರು ದಿನಗಳಿಂದಲೂ ಶಿರಸಿಯಲ್ಲೇ ತಂಗಿದ್ದಾರೆ. ಹೀಗಾಗಿ ಶಿರಸಿಯ ವಿವಿಧೆಡೆ ತಿರುಗಾಡಿ ಶಿರಸಿಯೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರು ಶಿರಸಿ ತಾಲೂಕಿನ ಮಳಲಗಾಂವ್ ನಲ್ಲಿರುವ ಅವರ ಅಜ್ಜಿ ಮನೆಗೆ ಭೇಟಿ ನೀಡಿದ , ಅಲ್ಲಿ ಕುಟುಂಬಸ್ಥರೊಂದಿಗೆ ಕೆಲ ಕಾಲ ಸಮಯ ಕಳೆದಿದ್ದಾರೆ. ತದನಂತರ ಶಕ್ತಿಪೀಠಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಬನವಾಸಿಯ ಮಧುಕೇಶ್ವರನ ದರ್ಶನವನ್ನು ಕೂಡ ಪಡೆದರು.
ನಂತರ ಸಹಸ್ರಲಿಂಗಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದಷ್ಟು ಫೊಟೊಗೆ ಪೋಸ್ ನೀಡಿ ಫೇಸ್‌ಬುಕ್ ನಲ್ಲಿ ಹಂಚಿಕೊಂಡಿರುವ ಅವರು, ‘ನಮ್ಮೂರ ಮಂದಾರ ಹೂವೆ’ ಚಿತ್ರೀಕರಣದ ವೇಳೆಗೆ ಇಲ್ಲಿಗೆ ಬಂದಿದ್ದೆ. ಅದಾದನಂತರ 25 ವರ್ಷಗಳ ಬಳಿಕ ಮತ್ತೆ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಶಿವಣ್ಣನ ಅಜ್ಜಿಯ ಮನೆಯಿಂದ ಹಿಡಿದು ಅನೇಕ ಸಂಬಂಧಿಗಳ ಮನೆ ಕೂಡ ಶಿರಸಿಯಲ್ಲಿಯೇ ಇರೋದು. ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಕೂಡ ಶಿವಣ್ಣನ ಬಾಮೈದ. ಹೀಗಾಗಿ ಕುಪಟೂರಿನ ಅವರ ಮನೆಗೂ ಈ ವೇಳೆ ಅವರು ಭೇಟಿ ನೀಡಿದ್ದಾರೆ. ಶಿವಣ್ಣನ ಈ ಸುತ್ತಾಟದ ವೇಳೆ ಅವರ ಪತ್ನಿ ಗೀತಾ, ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ ಸೇರಿದಂತೆ ಅನೇಕರು ಸಾಥ್ ನೀಡಿದ್ದಾರೆ.
ಇನ್ನು ಶಿವರಾಜ್ ಕುಮಾರ್ ರವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಒಂದಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿ ಆಗ್ತಿವೆ. ಹಾಗೂ ಇದೆಲ್ಲದರ ನಡುವೆ ಶಿವಣ್ಣ ಬಿಡು ಮಾಡಿಕೊಂಡು ಶಿರಸಿಗೆ ಭೇಟಿ ನೀಡಿರುವುದು ಅಲ್ಲಿನ ಅಭಿಮಾನಿಗಳಿಗೆ ಸಂತಸ ತಂದಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ