Monday, October 6, 2025

Latest Posts

ಮಹಾಮೈತ್ರಿಕೂಟಕ್ಕೆ ಶಾಕ್! ಸಮೀಕ್ಷೆ ಹೇಳ್ತಿದೆ – ಮತ್ತೆ NDA ಅಧಿಕಾರಕ್ಕೆ?

- Advertisement -

ಬಿಹಾರದಲ್ಲಿ ರಾಜಕೀಯ ಕಾದಾಟ ಮತ್ತೊಮ್ಮೆ ಬಿಸಿ ಬಿಸಿ ಹಂತಕ್ಕೆ ತಲುಪಿದೆ. 2025ರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗವು ಘೋಷಿಸಿದೆ. ರಾಜ್ಯದ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ನವೆಂಬರ್ 6ರಂದು ಮತ್ತು ಎರಡನೇ ಹಂತ ನವೆಂಬರ್ 11ರಂದು ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ನವೆಂಬರ್ 14ರಂದು ನಡೆಯಲಿದೆ. ಈ ಘೋಷಣೆಯೊಂದಿಗೆ ಬಿಹಾರದ ರಾಜಕೀಯ ವಾತಾವರಣ ಕಾವು ಪಡೆದುಕೊಂಡಿದೆ.

MATRIZE-IANS ಅಭಿಪ್ರಾಯ ಸಮೀಕ್ಷೆಯ ಪ್ರಕಾರ, ಈ ಬಾರಿ ಎನ್ಡಿಎ ಬಣ ಸ್ಪಷ್ಟ ಮುನ್ನಡೆಯಲ್ಲಿದೆ. ಎನ್ಡಿಎ 150ರಿಂದ 160 ಸ್ಥಾನಗಳವರೆಗೆ ಗೆಲ್ಲುವ ನಿರೀಕ್ಷೆ ಇದೆ. ಮಹಾಮೈತ್ರಿಕೂಟಕ್ಕೆ 70ರಿಂದ 85 ಸ್ಥಾನಗಳು ಮತ್ತು ಇತರ ಪಕ್ಷಗಳಿಗೆ 9ರಿಂದ 12 ಸ್ಥಾನಗಳ ಅಂದಾಜು ಬಂದಿದೆ. ಅಂದರೆ, ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಸೂಚನೆ ಈ ಸಮೀಕ್ಷೆ ನೀಡುತ್ತಿದೆ.

ಬಿಜೆಪಿ ಒಂಟಿಯಾಗಿ 80ರಿಂದ 85 ಸ್ಥಾನಗಳು, ಜೆಡಿಯು 60ರಿಂದ 65 ಸ್ಥಾನಗಳು ಪಡೆಯುವ ಸಾಧ್ಯತೆ ಇದೆ. ಹ್ಯಾಮ್ ಪಕ್ಷಕ್ಕೆ 3ರಿಂದ 6 ಮತ್ತು ಎಲ್‌ಜೆಪಿ(ಆರ್)ಗೆ 4ರಿಂದ 6 ಸ್ಥಾನಗಳ ಅಂದಾಜು ಇದೆ. ವಿರೋಧ ಬಣದ ಆರ್‌ಜೆಡಿ 60ರಿಂದ 65, ಕಾಂಗ್ರೆಸ್ 7ರಿಂದ 10 ಮತ್ತು ಎಡಪಕ್ಷಗಳು 6ರಿಂದ 9 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಹೇಳಲಾಗಿದೆ. ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ಶೇ.7ರಷ್ಟು ಮತಗಳನ್ನು ಪಡೆದು 2ರಿಂದ 5 ಸ್ಥಾನಗಳವರೆಗೆ ಗೆಲ್ಲಬಹುದು ಎನ್ನಲಾಗಿದೆ.

ಎನ್ಡಿಎಗೆ ಮುನ್ನಡೆ ಸಿಕ್ಕಿರುವುದಕ್ಕೆ ನಿತೀಶ್ ಕುಮಾರ್ ಅವರ ಆಡಳಿತ ಅನುಭವ ಹಾಗೂ ಪ್ರಧಾನಿ ಮೋದಿ ಅವರ ಜನಪ್ರಿಯತೆ ಮುಖ್ಯ ಕಾರಣವೆಂದು ತಜ್ಞರು ಹೇಳಿದ್ದಾರೆ. ವಿರೋಧ ಬಣದಲ್ಲಾದ ಒಳಜಗಳ ಮತ್ತು ನಾಯಕತ್ವದ ಕೊರತೆಯೂ ಮಹಾಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಆದರೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ಸ್ಥಳೀಯ ಸಮಸ್ಯೆಗಳ ವಿಚಾರಗಳಲ್ಲಿ ವಿರೋಧ ಪಕ್ಷಗಳು ಜನಮನ ಗೆಲ್ಲಲು ಯತ್ನಿಸುತ್ತಿವೆ.

ಒಟ್ಟಿನಲ್ಲಿ, ಈ ಚುನಾವಣೆಯು ಬಿಹಾರದ ರಾಜಕೀಯ ಭವಿಷ್ಯ ನಿರ್ಧರಿಸುವ ತೀರ್ಮಾನಕಾರಿ ಹಂತವಾಗಲಿದೆ. ಎನ್ಡಿಎ ಮತ್ತೆ ಅಧಿಕಾರ ಹಿಡಿಯುತ್ತದೆಯಾ, ಅಥವಾ ಮಹಾಮೈತ್ರಿಕೂಟ ಹೊಸ ಅಚ್ಚರಿ ತರುತ್ತದೆಯಾ ಎಂಬ ಕುತೂಹಲ ಈಗ ಹೆಚ್ಚುತ್ತಿದೆ. ಜನರ ತೀರ್ಪು ನವೆಂಬರ್ 14ರಂದು ಸ್ಪಷ್ಟವಾಗಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss