ಮಂಡ್ಯ ತಾಯಿ–ಮಗಳು ಸಾವಿಗೆ ಶಾಕಿಂಗ್ ಟ್ವಿಸ್ಟ್!

ಮಂಡ್ಯ ಜಿಲ್ಲೆಯಲ್ಲಿ ನಡೆದ ತಾಯಿ–ಮಗಳು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತರು ತಾಯಿ ಶಂಕುತಲಾದೇವಿ (46) ಮತ್ತು ಮಗಳು ಪ್ರಿಯಾಂಕಾ (19) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಪ್ರಿಯಾಂಕಾಗೆ ಗ್ರಾಮದ ಮುತ್ತುರಾಜ್ (34) ಎಂಬ ವಿವಾಹಿತನೊಂದಿಗೆ ಪ್ರೇಮ ಸಂಬಂಧ ಇದ್ದುದು ಬೆಳಕಿಗೆ ಬಂದಿದೆ.

ಮುತ್ತುರಾಜ್‌ಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ ಎನ್ನಲಾಗಿದೆ.
ಆದರೂ, ಆತ ಪ್ರತಿ ದಿನ ಪ್ರಿಯಾಂಕಾ ಮನೆಗೆ ಬರುತ್ತಿದ್ದುದಾಗಿ ತಿಳಿದುಬಂದಿದೆ. ಮೊದಲಿಗೆ ಇದನ್ನು ಸಾಮಾನ್ಯವಾಗಿ ತೆಗೆದುಕೊಂಡಿದ್ದ ಮನೆಯವರಿಗೆ, ಬಳಿಕ ವಿಷಯ ತಿಳಿದು ಬುದ್ಧಿ ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ಕಳೆದ 6ರಂದು ಮುತ್ತುರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರ ಬಳಿಕ ಪ್ರಿಯಾಂಕ ಮನೆಯಲ್ಲೂ ಗಲಾಟೆ ನಡೆದಿದ್ದುದಾಗಿ ಮಾಹಿತಿ ಇದೆ. ಪ್ರಿಯಾಂಕಗೆ ಬೇರೆ ಯುವಕನೊಂದಿಗೆ ಮದುವೆ ಮಾತುಕತೆ ನಡೆದಿದ್ದು, ಸಾವಿನ ದಿನವೇ ಹುಡುಗನ ಮನೆಗೆ ಹೋಗುವ ಕಾರ್ಯಕ್ರಮವಿತ್ತು ಎನ್ನಲಾಗಿದೆ.

ಆದರೆ, ಮುತ್ತುರಾಜ್ ಪ್ರಿಯಾಂಕನನ್ನು ಪೀಡಿಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆಗಳ ನಡುವೆ, ಮರ್ಯಾದೆಗೆ ಅಂಜಿ ತಾಯಿ–ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ. ದೂರು ಆಧರಿಸಿ ಹಲಗೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುತ್ತುರಾಜ್‌ನನ್ನು ವಿಚಾರಣೆ ನಡೆಸಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮತ್ತಷ್ಟು ವಿಚಾರಣೆ ನಡೆಯಲಿದೆ. ಈ ಕುರಿತು ಮಂಡ್ಯ ಎಸ್‌ಪಿ ಶೋಭಾರಾಣಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ಪೂರ್ಣಗೊಂಡ ಬಳಿಕ ನಿಜಾಂಶ ಹೊರಬರುತ್ತದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆ ನಂತರವೇ ಸ್ಪಷ್ಟವಾಗಲಿದೆ.

ವರದಿ : ಲಾವಣ್ಯ ಅನಿಗೋಳ

About The Author