ಹೊಸದಿಲ್ಲಿ: ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು ರೋಹಿತ್, ಕೊಹ್ಲಿಯಂತಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಶುಭಮನ್ ಗಿಲ್ ಯಂಗ್ ಇಂಡಿಯಾದ ಸಾರಥಿಯಾಗಿ ಆಯ್ಕೆಯಾಗಿದ್ದಾರೆ.
ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯು ಜುಲೈ 6 ರಂದು ಜಿಂಬಾಬ್ವೆಯ ಹರಾರೆಯಲ್ಲಿ ಪ್ರಾರಂಭವಾಗಲಿದೆ. ನಂತರದ ಪಂದ್ಯಗಳು ಜುಲೈ 7,10,13 ಮತ್ತು 14 ರಂದು ನಡೆಯಲಿದ್ದು, ಈ ಎಲ್ಲಾ ಪಂದ್ಯಗಳು ಕೂಡ ಹರಾರೆಯಲ್ಲಿ ನಡೆಯಲಿವೆ
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದ ನಿತೀಶ್ ರೆಡ್ಡಿ , ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ತುಷಾರ್ ದೇಶಪಾಂಡೆ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ಅವರಿಗೂ ಕೂಡ ವಿರಾಮವನ್ನು ನೀಡಲಾಗಿದೆ. T20 ವಿಶ್ವಕಪ್‌ಗಾಗಿ ಸ್ಟ್ಯಾಂಡ್‌ಬೈ ಆಟಗಾರರಾಗಿದ್ದ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
USA ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ T20 ವಿಶ್ವಕಪ್ ನಲ್ಲಿ ತಂಡದಿಂದ ಆಶ್ಚರ್ಯಕರವಾಗಿ ಹೊರಗುಳಿದಿದ್ದ ರಿಂಕು ಸಿಂಗ್ ಅವರನ್ನು ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. 15 ಸದಸ್ಯರ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಸೇರಿದ್ದಾರೆ. ಇವರಿಬ್ಬರೂ T20 ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದಾರೆ ಆದರೆ ಆಡುವ ಹನ್ನೊಂದರಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಇನ್ನು ಹೊಸಬರ ಆಯ್ಕೆಯ ವಿಚಾರ ನೋಡೋದಾದರೆ, ಅಭಿಷೇಕ್ ಶರ್ಮಾ ಮತ್ತು ರಿಯಾನ್ ಪರಾಗ್ ತಮ್ಮ ಅದ್ಭುತ ಬ್ಯಾಟಿಂಗ್‌ನೊಂದಿಗೆ ಐಪಿಎಲ್ 17 ರಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಪಂಜಾಬ್ ಬ್ಯಾಟ್ಸ್‌ಮನ್ ಅಭಿಷೇಕ್ 484 ರನ್‌ಗಳಿಸಿ ಅಬ್ಬರಿಸಿದ್ದರೆ, ಅಸ್ಸಾಂನ ಮೊದಲ ಆಟಗಾರ ರಾಜಸ್ಥಾನ್ ರಾಯಲ್ಸ್ ತಂಡದ ಪರಾಗ್ 573 ರನ್ ಗಳಿಸಿ ಗಮನ ಸೆಳೆದಿದ್ದರು.
15 ಆಟಗಾರರ ತಂಡವನನ್ನು ನೋಡೋದಾದ್ರೆ… ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್,ಧ್ರುವ್ ಜುರೆಲ್ ,ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್ , ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Team India : ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್!
- Advertisement -
- Advertisement -